ನೀರಿನಲ್ಲಿ ಸೂಕ್ಷ್ಮಾಣು ಜೀವಿ, ಅಮೋನಿಯಾ ಅಂಶ ಹೆಚ್ಚಾಗಿರುವುದು ಧೃಢ….
ಕಾಪು: ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತಗೊಂಡಿದ್ದು, ಗ್ರಾಮಸ್ಥರು ಆತಂಕಿತರಾಗಿದ್ದಾರೆ.
ಉಮ್ಮರ್ ಸಾಹೇಬ್, ಅಮಣಿ ಪಾಣಾರ, ಸಂಕ್ರಾಯ ಆಚಾರ್ಯ, ರುಕ್ಮಿಣಿ ಭಟ್, ಮಾಲಿನಿ ರಾವ್, ಸೂರ್ಯ ಮೇಸ್ತ್ರಿ, ಸುಬ್ರಾಯ ಭಟ್, ಹಯವದನ ಪುರಾಣಿಕ್, ಸಂಜೀವ ದೇವಾಡಿಗ, ಹರಿದಾಸ್ ಭಟ್ ಅವರ ಮನೆಯ ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಕಲುಷಿತಗೊಂಡಿರುವ ನೀರು ಕುಡಿಯುವುದಕ್ಕೆ ಮಾತ್ರವಲ್ಲದೇ ದಿನ ಬಳಕೆಗೆ ಬಳಸುವುದೂ ಕಷ್ಟಸಾಧ್ಯವೆಂಬಂತಾಗಿದೆ. ಹಾಗಾಗಿ ಎಲ್ಲಾ ಮನೆಯವರೂ ಪಕ್ಕದಲ್ಲೇ ಇರುವ ಬಾವಿಯ ನೀರನ್ನು ಕುಡಿಯುವುದಕ್ಕೆ ಮತ್ತು ಗ್ರಾಮ ಪಂಚಾಯತ್ ನೀಡುವ ನಳ್ಳಿ ನೀರನ್ನು ಇತರ ಕೆಲಸಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳುತ್ತಿದ್ದಾರೆ.
ಬಾವಿ ನೀರು ಕಲುಷಿತಗೊಂಡಿರುವ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾ. ಪಂ. ಮತ್ತು ಆರೋಗ್ಯ ಇಲಾಖೆ ಸಿಬಂದಿಗಳು ಎರಡೆರಡು ಬಾರಿ ಭೇಟಿ ನೀಡಿ, ನೀರನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ಈ ನಡುವೆಯ ಕೆಲ ಮನೆಯವರು ಉಡುಪಿಯ ಖಾಸಗಿ ಪ್ರಯೋಗಾಲಯದಲ್ಲಿ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ನೀಡಿದ್ದಾರೆ. ಅದರಲ್ಲಿ ಸೂಕ್ಷ್ಮಾಣು ಜೀವಿಗಳು ಮತ್ತು ಅಮೋನಿಯಾ ಅಂಶ ಹೆಚ್ಚಾಗಿರುವುದು ಧೃಢ ಪಟ್ಟಿದೆ. ಆದರೆ ಈ ಪರಿಸ್ಥಿತಿ ಯಾಕಾಗಿ ನಿರ್ಮಾಣವಾಗಿದೆ ಎನ್ನುವುದು ಸ್ಥಳೀಯರಿಗೆ ಇನ್ನೂ ತಿಳಿದು ಬಂದಿಲ್ಲ.
10 ವರ್ಷದಿಂದ ಇಲ್ಲಿ ವಾಸವಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಮನೆಯ ಬಾವಿಯ ನೀರು ಕಲುಷಿತಗೊಂಡಿದೆ. ನೀರು ಸಂಪೂರ್ಣ ಕೆಂಪಾಗಿದ್ದು ಗಬ್ಬು ವಾಸನೆ ಬರುತ್ತಿದೆ. ಕೆಟ್ಟ ನೀರಿನ ಕಾರಣದಿಂದಾಗಿ ಮನೆಯ ಸುತ್ತಲೂ ಗಬ್ಬು ವಾಸನೆ ಹರಡಿದೆ. ಮಳೆಗಾಲ ಆರಂಭಗೊಂಡ ಬಳಿಕ ಸಮಸ್ಯೆ ತಲೆ ದೋರಿದ್ದು ಗ್ರಾ. ಪಂ. ಜತೆಗೆ ನಾವು ವೈಯಕ್ತಿಕವಾಗಿ ನಾವು ಕೂಡಾ ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಿದ್ದೇವೆ. ನೀರು ಹಾಳಾಗಿರುವ ಬಗ್ಗೆ ವರದಿ ಬಂದಿದೆ. ಪ್ರಯೋಗಾಲಯದ ವೈದ್ಯರು ಔಷಧ ಕೊಟ್ಟಿದ್ದಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಸ್ಥಳೀಯ ನಿವಾಸಿ ಜನಾರ್ದನ ರಾವ್ ತಿಳಿಸಿದ್ದಾರೆ.

