ಕಡಂದಲೆ: ಪುತ್ತಿಗೆಗುತ್ತು ಕಡಂದಲೆ ಪರಾಡಿಯಲ್ಲಿ ಜೂ. 27ರಂದು ಭತ್ತದ ಕೃಷಿ ಪ್ರಾತ್ಯಕ್ಷಿಕೆ ನಡೆಯಿತು. ಗುತ್ತಿನ ಯಜಮಾನ ಕೆ.ಪಿ ಸಂತೋಷ್ ಕುಮಾರ್ ಎಂ.ಶೆಟ್ಟಿ ಪ್ರಾರ್ಥನೆ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ 38 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಮ್ಮ ಗುತ್ತಿಗೆ ಸೇರಿದ ಸುಮಾರು 60 ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷವು ಭತ್ತದ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇವೆ. ವರ್ಷಕ್ಕೆ ಮೂರು ಬಾರಿ ಭತ್ತದ ಬೆಳೆ ಬೆಳೆಯುತ್ತೇವೆ. ನೂರಕ್ಕೂ ಅಧಿಕ ಕೃಷಿ ಕಾರ್ಮಿಕರಿಗೆ ದುಡಿಮೆಯ ಅವಕಾಶವನ್ನೂ ನೀಡಿದ್ದೇವೆ. ನಗರದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡವ ಅವಕಾಶ ದೊರೆತ್ತಿರುವುದು ಸಂತಸದ ವಿಷಯ ಎಂದರು.
ದ.ಕ. ಜಿಲ್ಲಾ ಹಾಲು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಪುತ್ತಿಗೆಗುತ್ತು ಕಡಂದಲೆ ಪರಾಡಿ ಕೂಡು ಕುಟುಂಬವಾಗಿದ್ದು ದೈವ ಹಾಗೂ ಕೃಷಿಗೆ ಹೆಚ್ಚಿನ ಮಹತ್ವ ನೀಡಿ ಬೆಳೆಯುತ್ತಿರುವ ಪ್ರತಿಷ್ಠಿತ ಮನೆತನ ಎಂದರು.
ಶಾಲೆಯ ವತಿಯಿಂದ ಕೆ.ಪಿ ಸಂತೋಷ್ ಕುಮಾರ್ ಎಂ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್, ಶಿಕ್ಷಕಿಯರಾದ ಶೋಭಾ ಭಟ್, ಜಯಲಕ್ಷ್ಮಿ, ವನಜಾ, ವಿದ್ಯಾರ್ಥಿ ಪೋಷಕರಾದ ರಾಕೇಶ್ ಕುಮಾರ್, ದಿವ್ಯಶ್ರೀ ರಾಕೇಶ್ ಉಪಸ್ಥಿತರಿದ್ದರು.

