Home Crime ಗೃಹಿಣಿ ಮಕ್ಕಳ ಅಶ್ಲೀಲ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ : ಆರೋಪಿ ಅರೆಸ್ಟ್…!!

ಗೃಹಿಣಿ ಮಕ್ಕಳ ಅಶ್ಲೀಲ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ : ಆರೋಪಿ ಅರೆಸ್ಟ್…!!

ಹುಣಸೂರು: ವಾಟ್ಸಪ್ ಮೂಲಕ ಗೃಹಿಣಿಯನ್ನ ಪರಿಚಯ ಮಾಡಿಕೊಂಡು ಅವರ ಹೆಣ್ಣುಮಕ್ಕಳ ಫೋಟೋಗಳನ್ನ ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ ಬ್ಲಾಕ್ ಮಾಡಿದ ಕಿರಾತಕನನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯನಗರ ಜಿಲ್ಲೆ ನಿವಾಸಿ ವೀರೇಶ್(28) ಬಂಧಿತ ಆರೋಪಿ.

ಗೃಹಿಣಿ ನೀಡಿದ ದೂರಿನ ಆಧಾರದ ಮೇರೆಗೆ ತಂಡ ನಿರ್ಮಿಸಿ ಕಾರ್ಯಾಚರಣೆ ನಡೆಸಿದ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಗದಗ್ ನಲ್ಲಿ ಆರೋಪಿಯನ್ನ ಪತ್ತೆ ಮಾಡಿ ಬಂಧಿಸಿದ್ದಾರೆ.

ಹುಣಸೂರು ತಾಲೂಕು ನಿಲುವಾಗಿಲು ಗ್ರಾಮದ ಗೃಹಿಣಿಯನ್ನ ವೀರೇಶ್ 6 ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದಾನೆ. ನಯವಾದ ಬಣ್ಣಬಣ್ಣದ ಮಾತುಗಳಿಂದ ಅವರ ಕುಟುಂಬದ ಮಾಹಿತಿ ಪಡೆದುಕೊಂಡಿದ್ದಾನೆ. ಪತಿಯನ್ನ ಕಳೆದುಕೊಂಡಿದ್ದ ಗೃಹಿಣಿ ನಯವಂಚಕನ ಮಾತಿಗೆ ಮರುಳಾಗಿ ಮಾಹಿತಿ ನೀಡಿದ್ದಾರೆ. ಅವರ ವಾಟ್ಸಾಪ್ ಸ್ಟೇಟಸ್ ನಲ್ಲಿದ್ದ ಫೋಟೋಗಳನ್ನ ಸ್ಕ್ರೀನ್ ಶಾಟ್ ತೆಗೆದುಕೊಂಡು ತನ್ನ ವಾಟ್ಸಾಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದಾನೆ.

ನಂತರ ಗೃಹಿಣಿಗೆ ಇದ್ದ ಮೂರು ಹೆಣ್ಣುಮಕ್ಕಳ ಫೋಟೋಗಳನ್ನ ಸಂಗ್ರಹಿಸಿ ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಅಲ್ಲದೆ ಸಂಭಂಧಿಕರ ಮೊಬೈಲ್ ನಂಬರ್ ಗಳನ್ನ ಸಂಗ್ರಹಿಸಿ ಅವರಿಗೂ ಅಶ್ಲೀಲ ಫೋಟೋಗಳನ್ನ ಹಾಕುವುದಾಗಿ ಬೆದರಿಸಿದ್ದಾನೆ. ಈತನ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.

ಎಸ್ಪಿ ವಿಷ್ಣುವರ್ಧನ್ ಹಾಗೂ ಅಡಿಷನಲ್ ಎಸ್ಪಿ ಮಲ್ಲಿಕ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಉಸ್ತುವಾರಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮುನಿಯಪ್ಪ ಹಾಗೂ ಪಿಎಸ್ಸೈ ರಾಧಾ ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯ ಲೊಕೇಷನ್ ಆಧಾರದ ಮೇಲೆ ಪತ್ತೆಹಚ್ಚಿ ಗದಗ್ ನಲ್ಲಿ ಬಂಧಿಸಿದ್ದಾರೆ.

ಅನಾಮಧೇಯ ವ್ಯಕ್ತಿಗಳ ಜೊತೆ ಪರಿಚಯ ಸ್ನೇಹ ಬೆಳೆಸಿಕೊಂಡರೆ ಆಪತ್ತು ಎಂಬ ಸಂದೇಶ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ರವಾನಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ಸಂಪರ್ಕ ಬೆಳೆಸುವ ಮುನ್ನ ಎಚ್ಚರದಿಂದ ಇರುವಂತೆ ಮೈಸೂರು ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.