ಮಂಗಳೂರು: ಮಂಗಳೂರಿನ ಬಂದರ್ ಪ್ರದೇಶದ ಮಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ 18 ವರ್ಷ ಸಪನಾ ಎಂಬಾಕೆ ಮಾರ್ಚ್ 6 ರಿಂದ ನಾಪತ್ತೆಯಾಗಿದ್ದಾಳೆ.
ಈ ಬಗ್ಗೆ ಆಕೆಯ ತಾಯಿ ಚಮೇಲಿ ದೇವಿ ಎಂಬವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಪನಾ ಅವರು 4 ಅಡಿ 8 ಇಂಚು ಎತ್ತರ, ಸಾಧಾರಣ ಕಪ್ಪು ಮೈಬಣ್ಣ, ಬಿಳಿ ಬಣ್ಣದ ನೆಟ್ ಇರುವ ಚೂಡಿದಾರ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾಳೆ. ಹಿಂದಿ ಮತ್ತು ಭೋಜ್‌ಪುರಿ ಭಾಷೆ ಮಾತನಾಡುತ್ತಾಳೆ. ಈ ಯುವತಿ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆಗೆ ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ ಗೆ ಮಾಹಿತಿಯನ್ನು ನೀಡಲು ಕೋರಲಾಗಿದೆ.
ಚಮೇಲಿ ದೇವಿ ಅವರು ತೋಟ ಬೆಂಗ್ರಯ ಬಾಡಿಗೆ ಮನೆಯಲ್ಲಿ 2 ವರ್ಷಗಳಿಂದ ವಾಸಮಾಡಿಕೊಂಡಿದ್ದು, ಅವರ ಪುತ್ರಿ ಸಪನಾ ಸುಮಾರು 6-7 ತಿಂಗಳಿನಿಂದ ಮಂಗಳೂರಿನ ಬಂದರ್ ನಲ್ಲಿರುವ ಮಾರ್ಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿ ರಾತ್ರಿ 8 ಗಂಟೆಯ ಹೊತ್ತಿಗೆ ಮನೆಗೆ ವಾಪಸಾಗುತ್ತಿದ್ದಳು.
ಮಾರ್ಚ್ 6 ರಂದು ಬೆಳಗ್ಗೆ 9 ಗಂಟೆಗೆ ಎಂದಿನಂತೆ ಮನೆಯಿಂದ ಕೆಲಸಕ್ಕೆಂದು ಬಂದರಿನಲ್ಲಿರುವ ಮಾರ್ಟ್ ಗೆ ಹೋಗಿದ್ದು, ಸಂಜೆ ಕೆಲಸ ಮುಗಿಸಿ ರಾತ್ರಿಯಾದರೂ ಮನೆಗೆ ವಾಪಸಾಗಿಲ್ಲ. ಅಕ್ಕಪಕ್ಕದವರಲ್ಲಿ ವಿಚಾರಿಸಿದ್ದು ಎಲ್ಲಿಯೂ ಪತ್ತೆಯಾಗಿಲ್ಲ. ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.



