ಕೋಟ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೋಟ ಸಮೀಪದ ಪಡುಕರೆ ಬೀಚ್‌ನಲ್ಲಿ ಪತ್ತೆಯಾಗಿದೆ.
ಶಿವಪುರ ಹೆಬ್ರಿ ನಿವಾಸಿ ಗ್ರೇಪ್ತಾ ಕ್ರಾಸ್ತಾ ಅವರ ಮಾವನ ಮಗ ಶಿವಪ್ರಸಾದ್ (27) ಅವರು ಜುಲೈ 20ರಂದು ನಾಪತ್ತೆಯಾಗಿದ್ದರು. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಹಾಗೂ ಕುಟುಂಬಸ್ಥರು ಯುವಕನಿಗಾಗಿ ಹುಡುಕಾಟ ನಡೆಸಿದಾಗ ಶಿವಪ್ರಸಾದ್ ಅವರು ಚಲಾಯಿಸುತ್ತಿದ್ದ ಬೈಕ್ ಬಾರ್ಕೂರು ಸೇತುವೆ ಸಮೀಪ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿತ್ತು.
ಇಂದು (ಜುಲೈ 22) ಬೆಳಿಗ್ಗೆ ಸುಮಾರು 7.30 ಗಂಟೆಗೆ ಪಡುಕರೆ ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿತು. ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ಮೃತದೇಹವನ್ನು ಪರಿಶೀಲಿಸಿದಾಗ, ಅದು ನಾಪತ್ತೆಯಾಗಿದ್ದ ಶಿವಪ್ರಸಾದ್ ಅವರದ್ದೇ ಎಂಬುದು ದೃಢಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೃತದೇಹವನ್ನು ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಆಂಬುಲನ್ಸ್ ಚಾಲಕ ಕಿಶೋರ್ ಶೆಟ್ಟಿ ಸೇರಿ ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.




