Home Crime ಕಳ್ಳತನ ಹಾಗೂ ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣ : ಆರೋಪಿಗೆ ಜೈಲು ಶಿಕ್ಷೆ…!!

ಕಳ್ಳತನ ಹಾಗೂ ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣ : ಆರೋಪಿಗೆ ಜೈಲು ಶಿಕ್ಷೆ…!!

ಸುಳ್ಯ: ಕಳ್ಳತನ ಹಾಗೂ ಪೊಲೀಸ್ ವಶದಿಂದ ಪರಾರಿಯಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಳ್ಯ ತಾಲೂಕಿನ ಅಜ್ಜಾವರ ನಿವಾಸಿ ಎ.ಎಂ. ಅಜೀಜ್‌ಗೆ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 96/2006ರ ಕಳ್ಳತನ ಪ್ರಕರಣ ಹಾಗೂ ಅ.ಕ್ರ. 103/2018ರ ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣಗಳ ವಿಚಾರಣೆಯನ್ನು ಮಾನ್ಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಸಲಾಯಿತು.

ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಶ್ರೀಮತಿ ದಮಯಂತಿ ಅವರು ತೀರ್ಪು ಪ್ರಕಟಿಸಿದರು.

ಅ.ಕ್ರ. 103/2018ರ ಪ್ರಕರಣದಲ್ಲಿ ಆರೋಪಿಗೆ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ ವಿಧಿಸಲಾಗಿದೆ.

ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 45 ದಿನಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇನ್ನು ಅ.ಕ್ರ. 96/2006ರ ಪ್ರಕರಣದಲ್ಲಿ ಐಪಿಸಿ ಕಲಂ 457ರಡಿ ಮೂರು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹5,000 ದಂಡ, ದಂಡ ಪಾವತಿಸದಿದ್ದಲ್ಲಿ 45 ದಿನಗಳ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಜೊತೆಗೆ ಐಪಿಸಿ ಕಲಂ 380ರಡಿ ಮೂರು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.