ಮಂಗಳೂರು : ಗಂಭೀರ ಪ್ರಕರಣಗಳಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಗದೇ ಇದ್ದಲ್ಲಿ ಅವರಿಗೆ ಜಾಮೀನು ನೀಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಈಗಾಗಲೇ ಸುಮಾರು 15 ರೌಡಿಗಳನ್ನು ಬಂಧಿಸಿದ್ದು ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಆರಂಭಿಸಲಾಗಿದೆ. ಪೊಲೀಸರ ಕೈಗೆ ಸಿಗದೇ ಇರುವ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಜಾಮೀನು ನೀಡಿದವರ ಕಂದಾಯ ದಾಖಲೆಗಳನ್ನು ನ್ಯಾಯಾಲಯದ ಆಸ್ತಿಯೆಂದು ಘೋಷಿಸಲಾಗುವುದು. ಈ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು 17 ಜಾಮೀನುದಾರರ ಹೆಸರಿನಲ್ಲಿರುವ ಆರ್ ಟಿಸಿಯನ್ನು ನ್ಯಾಯಾಲಯದ ಆಸ್ತಿಯೆಂದು ನಮೂದಿಸಲಾಗಿದೆ. 11 ಮಂದಿಗೆ 10 ಸಾವಿರದಿಂದ 2 ಲಕ್ಷ ರೂ. ವರೆಗೆ ದಂಡ ವಿಧಿಸಲಾಗಿದೆ. ಓರ್ವ ಆರೋಪಿಯ ಮನೆಯನ್ನು ನ್ಯಾಯಾಲಯದ ಮೂಲಕ ಹರಾಜು ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋಮು ದ್ವೇಷದ ಕೊಲೆ, ಹತ್ಯೆ, ದರೋಡೆ, ಸುಲಿಗೆ, ಅತ್ಯಾಚಾರ ಹೀಗೆ ಗಂಭೀರ ಪ್ರಕರಣಗಳಲ್ಲಿ ಪಾಲ್ಗೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ರೌಡಿ ಶೀಟರ್‌ಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ, ಅವರಿಗೆ ಜಾಮೀನು ನೀಡಿದವರಿಗೂ ಬಿಸಿ ಮುಟ್ಟಿಸಲಾಗಿದೆ. ಹೀಗಾಗಿ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡಲು ಬರುವವರು ಜಾಗ್ರತೆ ವಹಿಸಬೇಕಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಹೇಳಿದ್ದಾರೆ



