ಬೆಂಗಳೂರು : ಹೆಚ್ಚಿನ ಲಾಭಾಂಶದ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಹೊತ್ತಿರುವ ‘ಮೈತ್ರಿ ಪ್ಲಾಂಟೇಶನ್ ಅಂಡ್ ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಪ್ರಮುಖ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೆ.ಆರ್. ಪುರಂ ನಿವಾಸಿ ಎಂ. ಲಿಂಗರಾಜು (46) ಬಂಧಿತ. ಎಂಟು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈತ್ರಿ ಪ್ಲಾಂಟೇಶನ್ ಸಂಸ್ಥೆಯು ಅಲ್ಪಾವಧಿಯಲ್ಲಿ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಕೈಕೊಟ್ಟಿತ್ತು. ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಆರ್ಥಿಕ ಅಪರಾಧಗಳ ವಿಭಾಗದಲ್ಲಿ (EOW) 2015ರಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ಐಪಿಸಿ ಸೆಕ್ಷನ್ 415, 420, 406 ಸೇರಿದಂತೆ ವಿವಿಧ ಗಂಭೀರ ಕಲಂಗಳಡಿ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ನಗರದ ವಿವಿಧ ಠಾಣೆಗಳು ಮಾತ್ರವಲ್ಲದೆ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲೂ ಈತನ ವಿರುದ್ಧ ವಂಚನೆಯ ದೂರುಗಳು ದಾಖಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ಲಿಂಗರಾಜು ವಿರುದ್ಧ ಕರ್ನಾಟಕದ ಸೂರ್ಯನಗರ, ಕೆ.ಆರ್. ಪುರಂ, ಚಿಕ್ಕಬಳ್ಳಾಪುರ, ಹೊಸಕೋಟೆ ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಆಂಧ್ರಪ್ರದೇಶದ ವಿಜಯವಾಡ, ಗುಂಟೂರು ಸೇರಿದಂತೆ ವಿವಿಧೆಡೆ 6ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ.
ನ್ಯಾಯಾಲಯದಿಂದ ಘೋಷಿತ ಆರೋಪಿಯಾಗಿದ್ದ (Proclaimed Offender) ಈತನ ಪತ್ತೆಗಾಗಿ ಸಿಸಿಬಿ ವಿಶೇಷ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಈಗ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
ಎಂಟು ವರ್ಷಗಳ ಕಾಲ ಕಳ್ಳ-ಪೊಲೀಸ್ ಆಟವಾಡಿದ ಜನರಿಗೆ ಆಸೆ ಹುಟ್ಟಿಸಿ ಭಾವನೆಗಳ ಜೊತೆ ಆಟ ಆಡಿದ ಈ ‘ಮೈತ್ರಿ’ ವಂಚಕನ ಓಟಕ್ಕೆ ಸಿಸಿಬಿ ಪೊಲೀಸರು ಬ್ರೇಕ್ ಹಾಕಿದ್ದಾರೆ.



