Home Latest ಕಾಪು ದಿವಾಕರ ಶೆಟ್ಟಿ ಮನೆ ಕಳವು: ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

ಕಾಪು ದಿವಾಕರ ಶೆಟ್ಟಿ ಮನೆ ಕಳವು: ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

ಉಡುಪಿ: ಸಹಕಾರಿ ಮುಖಂಡ ಕಾಪು ದಿವಾಕರ ಶೆಟ್ಟಿ ಮುಂಬೈಗೆ ತೆರಳಿದ್ದ ವೇಳೆ ಮನೆಯ ಬೀಗ ಒಡೆದು ಸುಮಾರು ₹19.05 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸರು ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತರನ್ನು ತಮಿಳುನಾಡು ತಿರನಲ್ವೆಲಿ ನಿವಾಸಿ ಎಸಾಕ್ಕಿ ರಾಜ (28) ಮತ್ತು ನಂಬಿ ರಾಜ (23) ಎಂದು ಗುರುತಿಸಲಾಗಿದೆ

ಜನವರಿ 30 ರಂದು ಬೆಳಗಿನ ಜಾವ ಸುಮಾರು 1:45 ಗಂಟೆ ವೇಳೆಗೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯಲ್ಲಿರುವ “ಸಾಯಿಪ್ರೇಮ” ಎಂಬ ಮನೆಯಲ್ಲಿ ಈ ಕಳವು ನಡೆದಿದ್ದು, ಮನೆಯ ಮಾಲಕಿ ಸ್ಪೂರ್ತಿ ಡಿ. ಶೆಟ್ಟಿ ಅವರ ಪತಿ ದಿವಾಕರ ಶೆಟ್ಟಿ ಮುಂಬೈಗೆ ತೆರಳಿದ್ದ ವೇಳೆ, ಕಳ್ಳರು ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಯಾವುದೋ ಬಲವಾದ ಆಯುಧದಿಂದ ಒಡೆದು ಒಳನುಗ್ಗಿದ್ದಾರೆ. ನಂತರ ಮನೆಯ ದೇವರ ಕೋಣೆಯಲ್ಲಿ ಹಾಗೂ ಮಾಸ್ಟರ್ ಬೆಡ್ರೂಮ್ನ ಕಪಾಟಿನಲ್ಲಿ ಇರಿಸಿದ್ದ ಬೆಳ್ಳಿ ವಸ್ತುಗಳು, ಸುಮಾರು 30 ಗ್ರಾಂ ತೂಕದ ಕರಗಿಸಿದ ಗಟ್ಟಿ ಚಿನ್ನ, ರ್ಯಾಡೋ ಕಂಪನಿಯ ವಾಚ್ ಹಾಗೂ ನಗದು ಸೇರಿ ಒಟ್ಟು ಸುಮಾರು ₹19,05,000 ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳವು ನಡೆದಿರುವ ವಿಧಾನವನ್ನು ಅವಲೋಕಿಸಿದ ಪೊಲೀಸರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ಎಸ್. ನಾಯ್ಕ ಹಾಗೂ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯಪ್ರಸಾದ್ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಿದರು. ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕರಾದ ಆಝಮತ್ ಅಲಿ ಜಿ ಅವರ ನೇತೃತ್ವದ ತಂಡ ವಿಶೇಷ ಪತ್ತೆ ಕಾರ್ಯಾಚರಣೆ ನಡೆಸಿ ಕುಖ್ಯಾತ ಅಂತರ್ ರಾಜ್ಯ ಕಳ್ಳರಾದ ಇಸಾಕಿ ರಾಜಾ ಮತ್ತು ಆತನ ಸಹಚರ ನಂಬಿ ರಾಜರನ್ನು ಬಂಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯದ ನಿವಾಸಿಗಳಾದ ಇನ್ನೂ ಮೂವರು ಪ್ರಮುಖ ಆರೋಪಿತರ ಪತ್ತೆ ಹಾಗೂ ಕಳವಾದ ಸ್ವತ್ತಿನ ಸ್ವಾಧೀನಕ್ಕಾಗಿ ಪೊಲೀಸ್ ತಂಡ ಶೋಧ ಕಾರ್ಯಾಚರಣೆ ಮುಂದುವರಿಸಿದೆ.

ಬಂಧಿತ ಆರೋಪಿಗಳ ವಿರುದ್ಧ ಕೇರಳ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕರಾದ ಆಝಮತ್ ಅಲಿ ಜಿ ಅವರೊಂದಿಗೆ ಕಾಪು ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವಿ ಟಿ.ಐ. ಮತ್ತು ಶುಭಕರ, ಸಿಬ್ಬಂದಿಗಳಾದ ಮಹಮ್ಮದ್ ರಫೀಕ್, ನಾರಾಯಣ, ಮೋಹನ ಚಂದ್ರ, ರಘು, ಪಡುಬಿದ್ರಿ ಠಾಣೆಯ ಎಎಸ್ಐ ರಾಜೇಶ್, ಶಿರ್ವ ಠಾಣೆಯ ದಯಾನಂದ ಪ್ರಭು ಹಾಗೂ ಅನ್ವರ್ ಅಲಿ, ಕಾಪು ವೃತ್ತ ಕಚೇರಿಯ ಸಿಬ್ಬಂದಿಗಳಾದ ಶರಣಪ್ಪ ಹಾಗೂ ಜೀವನ್, ಜೀಪು ಚಾಲಕರಾದ ಜಗದೀಶ್ ಮತ್ತು ಸಿಡಿಆರ್ ವಿಭಾಗದ ದಿನೇಶ್ ಹಾಗೂ ನಿತಿನ್ ಪಾಲ್ಗೊಂಡಿದ್ದರು.