Home Latest ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ…!!

ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ…!!

ಉಳ್ಳಾಲ : ಗುರುವಿಲ್ಲದ ಏಕಲವ್ಯನೆಂಬ ಖ್ಯಾತಿಯ ಚಿತ್ರ ಕಲಾವಿದ, ಸಂಗೀತ ಸಂಯೋಜಕ ಮುಡಿಪು ನಿವಾಸಿ ಸತೀಶ್‌ (48) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮುಡಿಪು ಮಿತ್ತಬರೆ ಸಮೀಪ ನಡೆದಿದೆ.

ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆ ಸಮೀಪದ ಮರಕ್ಕೆ ಸತೀಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಡಿಪುವಿನಲ್ಲಿ ಸುಮಾರು ಮೂರೂವರೆ ದಶಕಗಳಿಂದ ‘ಸ್ವಾತಿ ಆರ್ಟ್ಸ್’ ಹೆಸರಿನಲ್ಲಿ ಬ್ಯಾನರ್‌ ಬರೆಯುವ ಕಾಯಕ ಸಹಿತ ಲಲಿತ ಕಲೆಗೆ ಸಂಬಂಧಿಸಿ ಸೃಜನಶೀಲ ಚಟುವಟಿಕೆಗಳನ್ನು ನಡೆಸುತ್ತಿದ್ದ ಅವರು ಗುರು ಮುಖೇನ ಚಿತ್ರ ಅಥವಾ ಸಂಗೀತ ಕಲಿತವರಲ್ಲ. ಸ್ವಯಂ ಆಸಕ್ತಿಯಿಂದ ಚಿತ್ರಕಲೆ ಹಾಗೂ ಸಂಗೀತ ಕಲಿತು ಅದನ್ನೇ ವೃತ್ತಿಯಾಗಿ ಸ್ವೀಕರಿಸಿ ಜೀವನ ಸಾಗಿಸುತ್ತಿದ್ದರು.

ಸ್ವತಃ ಕೀಬೋರ್ಡ್ ಪ್ಲೇಯರ್ ಆಗಿ ಸಾವಿರಾರು ಕಾರ್ಯಕ್ರಮಗಳಿಗೆ ಸಂಗೀತ ನೀಡಿದ್ದಲ್ಲದೇ, ಸಂಗೀತ ಸಂಯೋಜಕರೂ ಆಗಿದ್ದರು. ಕೀಬೋರ್ಡ್ ತರಬೇತಿ ತರಗತಿ ನಡೆಸಿ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣವನ್ನೂ ನೀಡಿದ್ದಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪರದೆ ಸಹಿತ ರಂಗಸಜ್ಜಿಕೆ, ಮೇಕಪ್‌, ಸಿಮೆಂಟ್‌ ಶಿಲ್ಪ, ಕ್ರಾಫ್ಟಿಂಗ್, ಬ್ಯಾನರ್‌ ಬರಹ ಕ್ಷೇತ್ರಗಳಲ್ಲೂ ದುಡಿದ ಸೃಜನಶೀಲರಾಗಿದ್ದರು. ಅವರಿಂದ ತರಬೇತಿ ಮತ್ತು ಪ್ರೇರಣೆ ಪಡೆದ ಅನೇಕ ಮಂದಿ ಕಲಾವೃತ್ತಿಯಲ್ಲಿ ಹೆಸರುವಾಸಿಯಾಗಿದ್ದಾರೆ.

ಕುಟುಂಬ ಕಲಹದಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಮೃತ ಸತೀಶ್ ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.