Home Dskshina Kannada ಬಂಟ್ವಾಳ : ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ : ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ತಾರಿಪಡ್ಪು ಎಂಬಲ್ಲಿ ತೆಂಗಿನಕಾಯಿ ತೆಗೆಯುವ ವೇಳೆ ಮರದಿಂದ ಬಿದ್ದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಗಣೇಶ್‌ ಎಂದು ಗುರುತಿಸಲಾಗಿದೆ.

ಅವರು ತಮ್ಮ ಅಣ್ಣ ಪ್ರಕಾಶ್ ಅವರೊಂದಿಗೆ ತೆಂಗಿನ ಕಾಯಿ ಮತ್ತು ಅಡಿಕೆ ಕೊಯ್ಯುವ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಮಾ.19ರಂದು ಬೆಳಿಗ್ಗೆ ಇಬ್ಬರೂ ನರಿಕೊಂಬು ಗ್ರಾಮದ ತಾರಿಪಡ್ಪು ಪ್ರದೇಶದಲ್ಲಿರುವ ವಿಠಲ ಮೂಲ್ಯ ಅವರ ಮನೆಯ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯಲು ತೆರಳಿದ್ದರು. ಮಧ್ಯಾಹ್ನ ಗಣೇಶ್ ಅವರು ಕಾಲಿಗೆ ಮತ್ತು ಕೈಗೆ ಹಗ್ಗವನ್ನು ಹಾಕಿಕೊಂಡು ತೆಂಗಿನ ಮರಕ್ಕೆ ಹತ್ತಿ ಸುಮಾರು 25 ಅಡಿ ಎತ್ತರಕ್ಕೆ ತೆರಳಿದ್ದ ವೇಳೆ ಕಾಲಿಗೆ ಕಟ್ಟಿದ್ದ ಹಗ್ಗ ಆಕಸ್ಮಿಕವಾಗಿ ತುಂಡಾಗಿ ಮರದ ಬುಡದ ಪಕ್ಕಕ್ಕೆ ಬಿದ್ದು ಅವರು ತೀವ್ರವಾಗಿ ಗಾಯಗೊಂಡಿದ್ದರು‌ ಎಂದು ತಿಳಿದು ಬಂದಿದೆ.

 

ಕೂಡಲೇ ಅವರನ್ನು ಪ್ರಕಾಶ್ ಮತ್ತು ವಿಠಲ ಮೂಲ್ಯ ಅವರು ಎಬ್ಬಿಸಿ ಆರೈಕೆ ಮಾಡಿದ್ದು, ತಲೆಗೆ ಗಂಭೀರ ಗಾಯವಾಗಿರುವುದು ಕಂಡುಬಂದಿತು. ಬಳಿಕ ಅವರನ್ನು ಚಿಕಿತ್ಸೆಗಾಗಿ ವಾಹನದಲ್ಲಿ ಬಂಟ್ವಾಳದ ಸೋಮಯಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ವೈದ್ಯರು ಪರೀಕ್ಷಿಸಿ ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

 

ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.