ಮಂಡ್ಯ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಡೆಯುವ ವೇಳೆ ಬೆಟ್ಟಿಂಗ್ ಹಣಕ್ಕಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಖತರ್ನಾಕ್ ಒಬ್ಬನನ್ನ ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮುದಿಗೆರೆ ಗ್ರಾಮದ
ಸಂತೋಷ್ ಅಲಿಯಾಸ್ ಐಪಿಎಲ್ ಸಂತೋಷ್ ಎಂದು ಗುರುತಿಸಲಾಗಿದೆ.
ಬಂಧಿತನಿಂದ 40 ಲಕ್ಷ ಮೌಲ್ಯದ 490 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಹೆಸರಿಗೆ ವ್ಯವಸಾಯ ಕಸುಬಾದ್ರೆ, ಮೂಲ ಕಾಯಕ ಮನೆಗಳ್ಳತನ ಮಾಡೋದು ಬಳಿಕ ಅದರಿಂದ ಬಂದ ಹಣದಲ್ಲಿ ಐಪಿಎಲ್ ಬೆಟ್ಟಿಂಗ್ ಆಡೋದು ಕಾಯಕವಾಗಿತ್ತು.
ಈತ ಐಪಿಎಲ್ ಬೆಟ್ಟಿಂಗ್ ಅತಿಯಾಗಿ ಆಡುತ್ತಿದ್ದರಿಂದ ಈತನನ್ನು ಐಪಿಎಲ್ ಸಂತೋಷ್ ಅಂತಾನೇ ಕರೆಯುತ್ತಿದ್ರು. ಈ ವ್ಯಕ್ತಿ ಬಿಂಡಗನವಿಲೆ, ಬೆಳ್ಳೂರು, ನಾಗಮಂಗಲ, ತುರುವೆಕೆರೆ, ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಮನೆಗಳ್ಳತನವನ್ನು ಮಾಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ.
ಪದೇ ಪದೇ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾದ್ದರಿಂದ ನಾಗಮಂಗಲ ಸಿಪಿಐ ನಿರಂಜನ್ ನೇತೃತ್ವದಲ್ಲಿ ಪಿಎಸ್‌ಐ ರವಿಕುಮಾರ್, ಮಾರುತಿ ಒಳಗೊಂಡ 10 ಜನರ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಬಳಿಕ ಈ ತಂಡ ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಆಧರಿಸಿ ಖತರ್ನಾಕ್ ಸಂತೋಷ್‌ನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದೆ.