ಬೆಂಗಳೂರು: ಕರ್ನಾಟಕದಲ್ಲಿರುವವರೆಗೆ ನಾನು ಯಾವತ್ತೂ ಕನ್ನಡ ಮಾತಾಡಲ್ಲ ಎಂದು SBI ಮಹಿಳಾ ಮ್ಯಾನೇಜರ್ ದರ್ಪ ತೋರಿಸಿರುವ ಘಟನೆ ಆನೇಕಲ್ ತಾಲೂಕು ಸೂರ್ಯ ನಗರ ಎಸ್ ಬಿ ಐ ಕಚೇರಿಯಲ್ಲಿ ನಡೆದಿದೆ.
ಆ ಮ್ಯಾನೇಜರ್ ಕನ್ನಡ ಮಾತಾಡಲ್ಲ. ಹಿಂದಿ ಮಾತಾಡ್ತೀನಿ ಎಂದು ಹೇಳುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗಾಗಿ ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಆತ ದರ್ಪದಿಂದ ಮಾತಾಡಿರೋ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಂತೆ ಪ್ರತಿಭಟನೆಯ ಭೀತಿಯಿಂದ ಬ್ಯಾಂಕ್ ಮ್ಯಾನೇಜರ್ ಕ್ಷಮೆ ಕೇಳಿದ್ದರು.
ಇದೀಗ ಕನ್ನಡ ಮಾತಾಡಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್ ನಡೆ ಬಗ್ಗೆ ಸಿಎಂ ಮುಖ್ಯಮಂತ್ರಿ ಖಂಡನೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ಜನರ ಜೊತೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು. ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವುದು ತೀವ್ರವಾಗಿ ಖಂಡನೀಯ.
ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮವನ್ನು ಪ್ರಶಂಸಿಸುತ್ತೇವೆ. ಅಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನ ಘನತೆಯಿಂದ ನಡೆಸಿಕೊಳ್ಳಬೇಕು. ಗ್ರಾಹಕರ ಜೊತೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಪ್ರಯತ್ನ ಮಾಡಬೇಕು.
ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿ ಕಡ್ಡಾಯಗೊಳಿಸಬೇಕು. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು ಎಂದರ್ಥ ಎಂದು ಹೇಳುತ್ತಾ ಕೇಂದ್ರದ ಹಣಕಾಸು ಇಲಾಖೆಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಕನ್ನಡಪರ ಸಂಘಟನೆಗಳು SBI ಹೆಡ್ ಆಫೀಸ್ ಜನರಲ್ ಮ್ಯಾನೇಜರ್ ಸುಶೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಅವರ ಮನವಿಯನ್ನು ಸ್ವೀಕರಿಸಿದ ಅವರು ಬ್ಯಾಂಕ್ ಮ್ಯಾನೇಜರ್ ವರ್ಗಾವಣೆ ಮಾಡಿದ್ದಾರೆ.