Home Crime ಮಹಿಳಾ ಪೇದೆಯೊಬ್ಬರಿಗೆ ಹೆಡ್ ಕಾನ್‌ಸ್ಟೆಬಲ್’ವೊಬ್ಬ ಬೂಟು ಕಾಲಿನಿಂದ ಒದ್ದು ಹಲ್ಲೆ…!!

ಮಹಿಳಾ ಪೇದೆಯೊಬ್ಬರಿಗೆ ಹೆಡ್ ಕಾನ್‌ಸ್ಟೆಬಲ್’ವೊಬ್ಬ ಬೂಟು ಕಾಲಿನಿಂದ ಒದ್ದು ಹಲ್ಲೆ…!!

ಬೆಂಗಳೂರು: ನಗರದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ ಮಹಿಳಾ ಪೇದೆಯೊಬ್ಬರಿಗೆ ಹೆಡ್ ಕಾನ್‌ಸ್ಟೆಬಲ್’ವೊಬ್ಬ ಬೂಟು ಕಾಲಿನಿಂದ ಒದ್ದು ಹಲ್ಲೆ ನಡೆಸಿರುವ ಘಟನೆ ನಗರದ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಂಭವಿಸಿದೆ.

ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಪೇದೆ ರೇಣುಕಾ ಅವರ ಮೇಲೆ ಹೆಡ್ ಕಾನ್‌ಸ್ಟೇಬಲ್ ಆಗಿರುವ ಬಿಜಿ ಗೋವಿಂದರಾಜು ಅವರು ಬೂಟುಗಾಲಿನಲ್ಲಿ ಒದ್ದು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಠಾಣೆಯ ಎಎಸ್‌ಐ ತಿಮ್ಮೇಗೌಡ ಅವರು ಠಾಣೆಯಲ್ಲಿರುವ, ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡುವಂತೆ ರೇಣುಕಾ ಅವರಿಗೆ ಸೂಚಿಸಿದ್ದಾರೆ. ಅದರಂತೆ ರೇಣುಕಾ ಅವರು ಇಬ್ಬರಿಗೂ ಊಟ ಕೊಟ್ಟು ಬಂದಿದ್ದಾರೆ. ಈ ವೇಳೆ ಊಟ ಮಾಡುತ್ತಿದ್ದ ಹೆಣ್ಣು ಮಕ್ಕಳ ಕುರಿತು ಗೋವಿಂದರಾಜು ಅವರು ಕೆಟ್ಟದಾಗಿ ಮಾತನಾಡಿದ್ದಾರೆ. ಈ ವಿಚಾರವನ್ನು ಅವರು ರೇಣುಕಾ ಅವರ ಬಳಿ ಹೇಳಿಕೊಂಡಿದ್ದಾರೆ.

ಈ ವೇಳೆ ರೇಣುಕಾ ಅವರು ಹೆಣ್ಮಕ್ಕಳ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತಾಡಿದ್ದೀರಾ ಯಾಕೆ ಎಂದು ಗೋವಿಂದರಾಜು ಅವರನ್ನು ಪ್ರಶ್ನಿಸಿದ್ದು, ಇದರಿಂದ ಕೆಂಡಾಮಂಡಲಗೊಂಡಿರುವ ಗೋವಿಂದರಾಜು ಮಹಿಳೇ ಪೇದೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೆ, 2-3 ಬಾರಿ ಬೂಟು ಕಾಲಿನಿಂದಲೂ ಒದ್ದಿದ್ದಾರೆನ್ನಲಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಇತರೆ ಸಿಬ್ಬಂದಿಗಳೂ ರಕ್ಷಣೆಗೆ ಬಂದರೂ ಬಿಡದೆ ಹಲ್ಲೆ ನಡೆಸಿದ್ದಾರೆಂದು ಎಂದು ಮಾಹಿತಿ ತಿಳಿಯಲಾಗಿದೆ.

ಈ ಘಟನೆ ಸಂಬಂಧ ರೇಣುಕಾ ಅವರ ದೂರು ಆಧರಿಸಿ ಹೆಡ್ ಕಾನ್‌ಸ್ಟೇಬಲ್ ಬಿಜಿ ಗೋವಿಂದರಾಜು ವಿರುದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಇಬ್ಬರು ಹುಡುಗಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಂತರ ಇಬ್ಬರು ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರೇಣುಕಾ ಅವರ ಮೇಲೆ ಹಲ್ಲೆ ನಡೆದಿದ್ದು, ಘಟನೆ ಸಂಬಂಧ ಮುಖ್ಯ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರನ್ನು ಅಮಾನತುಗೊಳಿಸಲಾಗಿದೆ. ಸ್ಥಳದಲ್ಲಿದ್ದ ಮೂವರು ಪೊಲೀಸರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.