ಬೆಂಗಳೂರು: ನಗರದ ವೈಟ್‌ಫೀಲ್ಡ್ ಪ್ರದೇಶದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯಲ್ಲಿ ಮಹಿಳೆಯೊಬ್ಬಳು ತನ್ನ ಕಿರಿಯ ಮಗಳನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಸುವರ್ಣ (40) ಮತ್ತು ಅವರ ಮಗಳು ಕರುಣ್ಯ (14) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುವರ್ಣ ಅವರು ತಮ್ಮ ಮಗಳನ್ನು ಕೊಠಡಿಯಲ್ಲಿ ಉಸಿರುಗಟ್ಟಿಸಿ ಕೊಂದ ಬಳಿಕ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದ ಈ ಘಟನೆ ಮಂಗಳವಾರ ಬೆಳಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬ ಸದಸ್ಯರು ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಮನೆಯ ಪರಿಶೀಲನೆ ನಡೆಸಿದಾಗ ಘಟನೆ ಪತ್ತೆಯಾಯಿತು.
ಪೊಲೀಸರ ಪ್ರಕಾರ, ಸುವರ್ಣ ಅವರ ಪತಿ ಚಂದ್ರಶೇಖರ್ ಅವರು ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ತೆರಳಿದ್ದರು. ಪತ್ನಿಗೆ ಕರೆ ಮಾಡಿದರೂ ಉತ್ತರ ಸಿಗದ ಹಿನ್ನೆಲೆಯಲ್ಲಿ ತಮ್ಮ ಸಹೋದರನನ್ನು ಮನೆಗೆ ಕಳುಹಿಸಿದ್ದರು. ಸುಮಾರು ಬೆಳಗ್ಗೆ 11 ಗಂಟೆಗೆ ಕೊಠಡಿಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ವೈಟ್‌ಫೀಲ್ಡ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
ಸುವರ್ಣ ಅವರ ಸಹೋದರ ಸುರೇಶ್ ಕುಮಾರ್ ನೀಡಿದ ಮಾಹಿತಿಯಂತೆ, ದಂಪತಿಗಳು 18 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮಗನು ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕರುಣ್ಯ ಪೋಷಕರು ಹಾಗೂ ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಿದ್ದರು.
ಕುಟುಂಬ ಸದಸ್ಯರು ಘಟನೆಯ ನಿಖರ ಕಾರಣ ತಿಳಿದಿಲ್ಲವೆಂದು ತಿಳಿಸಿದ್ದಾರೆ. ಆದರೆ ಸುವರ್ಣ ಅವರ ಸಹೋದರಿ ಉಷಾ, ಆರ್ಥಿಕ ಒತ್ತಡದಿಂದ ಅವಳು ಮನೋವೈಕಲ್ಯಕ್ಕೆ ಒಳಗಾಗಿದ್ದಾಳೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
“ಆರ್ಥಿಕ ಸಮಸ್ಯೆಗಳ ಬಗ್ಗೆ ಅವಳು ಹಲವು ಬಾರಿ ನನ್ನೊಂದಿಗೆ ಮಾತನಾಡುತ್ತಿದ್ದರು. ಖರ್ಚು ನಿರ್ವಹಣೆಯಲ್ಲಿ ತೊಂದರೆ ಇದೆ ಎಂದು ಹೇಳುತ್ತಿದ್ದರು. ಇದೇ ಕಾರಣದಿಂದ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು. ಆದರೆ ಮಗಳನ್ನೂ ಕೊಂದಿರುವುದು ನೋವುಂಟುಮಾಡುತ್ತದೆ. ಸಂಪೂರ್ಣ ತನಿಖೆ ಅಗತ್ಯ,” ಎಂದು ಉಷಾ ಹೇಳಿದ್ದಾರೆ.
ಪೊಲೀಸರು ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಪೊಲೀಸರ ಹೇಳಿಕೆಯಂತೆ, ತಾಯಿ ಮಗಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಒಂದನ್ನು ಪತಿ ಚಂದ್ರಶೇಖರ್ ಅವರು ಮಗಳ ಹತ್ಯೆ ಕುರಿತು ದೂರು ನೀಡಿದಂತೆ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣವನ್ನು ಸುವರ್ಣ ಅವರ ಸಹೋದರ ಮಂಜುನಾಥ್ ಅವರು ಅನುಮಾನ ವ್ಯಕ್ತಪಡಿಸಿ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





