ಬೆಂಗಳೂರು: ಸಿನಿಮಾ ಚಿತ್ರೀಕರಣದ ಸಲುವಾಗಿ 25 ದಿನಗಳ ಕಾಲ ದುಬೈ ಹಾಗೂ ಯುರೋಪ್‌ಗೆ ತೆರಳಲು ನಟ ದರ್ಶನ್‌ಗೆ ನಗರದ 57ನೇ ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಜಾಮೀನಿನ ಮೇಲಿದ್ದಾರೆ. ದರ್ಶನ್ ಅವರಿಗೆ ಸಿನಿಮಾ ಕ್ಷೇತ್ರವೇ ಉದ್ಯೋಗದ ಆಸರೆಯಾಗಿದ್ದು, ಮುಂದಿನ ಚಿತ್ರದ ಶೂಟಿಂಗ್ ವಿದೇಶಗಳಲ್ಲಿ ನಿಗದಿಯಾಗಿದೆ. ಹೀಗಾಗಿ, ಜುಲೈ 1ರಿಂದ 27ರವರೆಗೆ ದುಬೈ ಸೇರಿದಂತೆ ಯುರೋಪ್‌ನ ಕೆಲ ದೇಶಗಳಿಗೆ ತೆರಳಲು ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯವು, ವಿದೇಶ ಪ್ರಯಾಣದ ದಾಖಲೆಗಳನ್ನು ಸಲ್ಲಿಸಬೇಕು. ಜತೆಗೆ, ವಿದೇಶ ಪ್ರಯಾಣ ಮುಗಿದ ತಕ್ಷಣ ವಾಪಾಸ್ ದೇಶಕ್ಕೆ ಆಗಮಿಸಬೇಕು. ಬೇಷರತ್ತಾಗಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕು ಷರತ್ತು ವಿಧಿಸಿ ಅನುಮತಿ ನೀಡಿದೆ.