Home Crime ಉಡುಪಿ : ನಗರಸಭೆಗೆ ಆಸ್ತಿ ತೆರಿಗೆ ವಂಚನೆ ಪ್ರಕರಣ : ಇಬ್ಬರ ಬಂಧನ…!!

ಉಡುಪಿ : ನಗರಸಭೆಗೆ ಆಸ್ತಿ ತೆರಿಗೆ ವಂಚನೆ ಪ್ರಕರಣ : ಇಬ್ಬರ ಬಂಧನ…!!

ಉಡುಪಿ ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಗರಸಭೆ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬನ್ನಂಜೆಯ ಶಾಲಿನಿ ಸೇರಿಗಾರ್ ಹಾಗೂ ಬ್ಯಾಂಕ್ ಸಿಬ್ಬಂದಿ ಸಚ್ಚಿದಾನಂದ ಲೇಔಟ್ ಕುಕ್ಕಿಕಟ್ಟೆ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ.

ಆನಂದ ಸುವರ್ಣ ಎಂಬವರು ಕಲ್ಮಾಡಿಯಲ್ಲಿ ರುವ ತನ್ನ ಕಟ್ಟಡಕ್ಕೆ ಸಂಬಂಧಪಟ್ಟಂತೆ 2025ರ ಅ.16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು 34,730 ರೂ. ಹಣವನ್ನು ನಗರಸಭೆ ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿ ಕೊಂಡಿರುವ ಶಾಲಿನಿ ಎಂಬಾಕೆಗೆ ನೀಡಿದ್ದು, ಅದಕ್ಕೆ ಶಾಲಿನಿ ತೆರಿಗೆ ಸ್ವೀಕೃತಿ ಆದ ಬಗ್ಗೆ ಸ್ವೀಕೃತಿಯನ್ನು ನೀಡಿದ್ದರು.

ಇತ್ತೀಚೆಗೆ ಆನಂದ ಸುವರ್ಣ ಆಸ್ತಿ ತೆರಿಗೆ ಪೋರ್ಟಲ್‌ನಲ್ಲಿ ತೆರಿಗೆ ಪಾವತಿಯಾದ ಬಗ್ಗೆ ತಪಾಸಣೆ ನಡೆಸಿದಾಗ ತೆರಿಗೆ ಪಾವತಿ ಆಗದೇ ಬಾಕಿ ಇರುವ ಬಗ್ಗೆ ತಿಳಿದು ಬಂದಿದೆ.

ಈ ವಿಚಾರವನ್ನು ಆನಂದ ಸುವರ್ಣ ಪೌರಾಯುಕ್ತರ ಗಮನಕ್ಕೆ ತಂದಿದ್ದು, ಅವರು ಕೂಡ ಪರಿಶೀಲಿಸಿದಾಗ ಬಾಕಿ ಇರುವುದು ಕಂಡು ಬಂದಿದೆ.

ನಂತರ ಕಚೇರಿಯಲ್ಲಿ ಕೆಲಸವನ್ನು ಮಾಡಿಕೊಂಡಿರುವ ಶಾಲಿನಿ ಅವರನ್ನು ಕರೆದು ವಿಚಾರಿಸಿದಾಗ ಆಕೆ ತಪ್ಪು ಒಪ್ಪಿಕೊಂಡಿದ್ದು, 2026ರ ಫೆ.16ರಂದು ಆಕೆ ಆನಂದ ಸುವರ್ಣ ರವರ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ಒಟ್ಟು 35,213ರೂ. ಭರಿಸಿದ್ದಳು. ಶಾಲಿನಿ, ಆನಂದ ಸುವರ್ಣ ನೀಡಿದ ತೆರಿಗೆ ಹಣವನ್ನು ಸರಕಾರಕ್ಕೆ ಕಟ್ಟದೇ ಚಲನ್‌ನಲ್ಲಿ ಯೂನಿಯನ್ ಬ್ಯಾಂಕ್‌ನ ಮೊಹರನ್ನು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಇನ್ನಿತರರೊಂದಿಗೆ ಸೇರಿ ಸರಕಾರಕ್ಕೆ ವಂಚನೆ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.