ಬೆಂಗಳೂರು: ಮದ್ವೆ ಆಹ್ವಾನ ಪತ್ರಿಕೆ ನೀಡುವುದಕ್ಕೆಂದು ಹೋದ ಯುವಕ ಮಸಣ ಸೇರಿದಂತಹ ಆಘಾತಕಾರಿ ಘಟನೆ ಬೆಂಗಳೂರಿನ ಹುಳಿಮಾವು ಬಳಿ ನಡೆದಿದೆ.
ಅಕ್ಷತ್ (28 ವರ್ಷ) ಮೃತಪಟ್ಟ ಯುವಕ.
ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಡೆದಿತ್ತು. ಮದುವೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದ ಅಕ್ಷತ್ ಅವರು ಇಲ್ಲಿಗೆ ಬಂದಿದ್ದು, ಬ್ರಹ್ಮರಥೋತ್ಸವದ ಪಲ್ಲಕ್ಕಿಗಳನ್ನು ನೋಡುತ್ತಾ ನಿಂತಿದ್ದ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಅಕ್ಷತ್ ಅವರ ಮದುವೆ ನಿಗದಿಯಾಗಿದ್ದು, ಮದುವೆ ಕಾಗದ ಹಂಚುವುದರಲ್ಲಿ ಅವರು ಬ್ಯುಸಿಯಾಗಿದ್ದರು. ಇದರ ನಡುವೆ ಕೋದಂಡರಾಮ ಬ್ರಹ್ಮರಥೋತ್ಸವಕ್ಕೆ ಬಂದಿದ್ದ ಅವರು ಅಲ್ಲಿ ಜಾತ್ರೆ ನೋಡಲು ನಿಂತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.





