ಮಂಗಳೂರು: 1997ರಲ್ಲಿ ಮಂಗಳೂರಿನ ಉರ್ವಾ ಪ್ರದೇಶದಲ್ಲಿ ನಡೆದಿದ್ದ ಭೀಕರ ಜೋಡಿ ಕೊಲೆ ಹಾಗೂ ಚಿನ್ನಾಭರಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಮಾರು 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಸದಸ್ಯ ಚಿಕ್ಕ ಹನುಮ ಎಂಬಾತನನ್ನು ಉರ್ವಾ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉರ್ವಾ ಪೊಲೀಸ್ ಠಾಣಾ ಮೊ.ನಂ. 113/1997, ಕಲಂ 400, 396, 460 ಐಪಿಸಿ ಅಡಿ ದಾಖಲಾಗಿದ್ದ ಈ ಪ್ರಕರಣವು ರಾಜ್ಯವ್ಯಾಪಿ ಸಂಚಲನ ಮೂಡಿಸಿದ್ದ ಜೋಡಿ ಕೊಲೆ ಪ್ರಕರಣವಾಗಿತ್ತು.
ಪ್ರಕರಣದ ಹಿನ್ನೆಲೆ : ದಿನಾಂಕ 12-10-1997 ರಂದು ಸಂಜೆ ಸುಮಾರು 4 ಗಂಟೆ ವೇಳೆಗೆ, ಕಂಕನಾಡಿಯ ಸೆಂಟ್ ಜೆರೋಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆಲೀವ್ ಅವರು ತಮ್ಮ ಅಣ್ಣನ ಮನೆಗೆ (ಉರ್ವಾ ಮಾರಿಗುಡಿ ಕ್ರಾಸ್) ಬಂದಾಗ ಮನೆ ಒಳಗಿನಿಂದ ಪ್ರತಿಕ್ರಿಯೆ ದೊರಕದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಮನೆಗೆ ಕೆಲಸಕ್ಕೆ ಇದ್ದ ಲೂಯಿಸ್ ಡಿಮೆಲ್ಲೋ (80) ಹಾಗೂ ರಂಜಿತ್ ವೇಗಸ್ (19) ಕಾಣಿಸದ ಕಾರಣ ಹುಡುಕಿದಾಗ, ಲೂಯಿಸ್ ಡಿಮೆಲ್ಲೋ ಅವರ ಮೃತದೇಹ ನೆಲಮಾಳಿಗೆಯ ಬಾತ್‌ರೂಂನಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ, ಮಹಡಿಯ ಬಾತ್‌ರೂಂನಲ್ಲಿ ರಂಜಿತ್ ವೇಗಸ್ ಅವರ ಮೃತದೇಹ ಪತ್ತೆಯಾಗಿದೆ. ಮೃತರ ಮೈಮೇಲಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು.
ಚಿನ್ನಾಭರಣ ಸುಲಿಗೆ ಉದ್ದೇಶದಿಂದ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿರುವ ಶಂಕೆಯ ಮೇರೆಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಂಡುಪಾಳ್ಯ ಗ್ಯಾಂಗ್ ಕೈವಾಡ ಬಹಿರಂಗ ನಂತರ ಬೆಂಗಳೂರು ವಿಜಯನಗರ ಪೊಲೀಸ್ ಠಾಣೆಯ ಅ.ಕ್ರ 674/1999 ಪ್ರಕರಣದ ತನಿಖೆ ವೇಳೆ, ಪೊಲೀಸರು ಬಂಧಿಸಿದ್ದ ನಾಲ್ವರು ಆರೋಪಿಗಳಾದ ದೊಡ್ಡ ಹನುಮ @ ಹನುಮ, ವೆಂಕಟೇಶ @ ಚಂದ್ರ, ಮುನಿಕೃಷ್ಣ @ ಕೃಷ್ಣ ಮತ್ತು ನಲ್ಲತಿಮ್ಮ @ ತಿಮ್ಮ—ಇವರು ವಿಚಾರಣೆ ವೇಳೆ ಉರ್ವಾ ಜೋಡಿ ಕೊಲೆ ಪ್ರಕರಣದಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದರು.
ಅವರ ಹೇಳಿಕೆಯಂತೆ, ದಂಡುಪಾಳ್ಯ ಕೃಷ್ಣ ಸೇರಿದಂತೆ ಒಟ್ಟು ಎಂಟು ಮಂದಿ ಸೇರಿ ಈ ಕೊಲೆ–ಸುಲಿಗೆ ಕೃತ್ಯ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 91 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಆರೋಪಿ ಚಿಕ್ಕ ಹನುಮ, ಲೂಯಿಸ್ ಡಿಮೆಲ್ಲೋ ಅವರ ಕತ್ತು ಕೊಯ್ದು ಕೊಲೆ ಮಾಡಿದ ದಂಡುಪಾಳ್ಯ ಕೃಷ್ಣನಿಗೆ ಸಹಕರಿಸಿದ್ದಾನೆ. ಜೊತೆಗೆ, ಮೇಲ್ಮಹಡಿಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ ರಂಜಿತ್ ವೇಗಸ್ ಅವರನ್ನು ಬೆನ್ನಟ್ಟಿ ಹಿಡಿದು ಕೊಲೆ ಮಾಡಲು ದೊಡ್ಡ ಹನುಮನಿಗೆ ನೆರವಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಒಟ್ಟು ಎಂಟು ಆರೋಪಿಗಳ ವಿರುದ್ಧ 2002ರಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಇದರಲ್ಲಿ ಚಿಕ್ಕ ಹನುಮ ಸೇರಿ ಮೂವರು ಪರಾರಿಯಾಗಿದ್ದರಿಂದ Absconding Charge Sheet ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆಯ ನಂತರ ಕೆಲ ಆರೋಪಿಗಳಿಗೆ ದೋಷಿ ತೀರ್ಪು ನೀಡಿ ನಂತರ ಹೈಕೋರ್ಟ್ ಆದೇಶದಂತೆ ಮರುವಿಚಾರಣೆ ನಡೆದು 2019ರಲ್ಲಿ ಪ್ರಮುಖ ಆರೋಪಿಗಳಿಗೆ ದೋಷಮುಕ್ತ ತೀರ್ಪು ನೀಡಲಾಗಿತ್ತು.
ಆದರೆ ಆರೋಪಿ ಚಿಕ್ಕ ಹನುಮ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ, 2010ರಿಂದಲೇ ಅವನ ವಿರುದ್ಧ ಎಲ್.ಪಿ.ಸಿ ವಾರೆಂಟ್ ಜಾರಿಯಲ್ಲಿತ್ತು.
ಆಂಧ್ರಪ್ರದೇಶದಲ್ಲಿ ಬಂಧನ ನಿರಂತರ ಶೋಧದ ಬಳಿಕ, ದಿನಾಂಕ 20-01-2026 ರಂದು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ, ಮದನಪಳ್ಳೆ ಸಮೀಪದ ವಿಜಯನಗರ ಕಾಲೋನಿಯಲ್ಲಿ ಚಿಕ್ಕ ಹನುಮನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಚಿಕ್ಕ ಹನುಮನ ವಿರುದ್ಧ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 13 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 8 ಪ್ರಕರಣಗಳಲ್ಲಿ ಇತರ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಪ್ರಸ್ತುತ, ಈತನ ವಿರುದ್ಧ ಮಂಗಳೂರು ನ್ಯಾಯಾಲಯದಲ್ಲಿ ಸಿ.ಸಿ ನಂ. 3429/2005 ವಿಚಾರಣೆ ಬಾಕಿಯಾಗಿದೆ.



