Home Kundapura News ಉಪ್ಪುಂದ: ಅಮ್ಮನವರ ತೊಪ್ಲಿನಲ್ಲಿ ನೂತನ ಶಿಲಾಮಯ ಶ್ರೀರಾಮ ಭಜನಾ ಮಂದಿರ ಲೋಕಾರ್ಪಣೆ..!

ಉಪ್ಪುಂದ: ಅಮ್ಮನವರ ತೊಪ್ಲಿನಲ್ಲಿ ನೂತನ ಶಿಲಾಮಯ ಶ್ರೀರಾಮ ಭಜನಾ ಮಂದಿರ ಲೋಕಾರ್ಪಣೆ..!

ಉಪ್ಪುಂದದ ಅಮ್ಮನವರ ತೊಪ್ಲಿನ ಶ್ರೀರಾಮ ಭಜನಾ ಮಂದಿರ ಹಾಗೂ ಶ್ರೀ ರಾಮ ಭಜನಾ ಮಂಡಳಿ (ರಿ.) ವತಿಯಿಂದ ನೂತನ ಶಿಲಾಮಯ ಶ್ರೀರಾಮ ಭಜನಾ ಮಂದಿರದ ಲೋಕಾರ್ಪಣೆ, ಶ್ರೀರಾಮ ಪ್ರತಿಷ್ಠೆ–ಬ್ರಹ್ಮಕಲಶಾಭೀಷೇಕ, ನಾಗ ಪ್ರತಿಷ್ಠೆ ಹಾಗೂ ಆಶ್ಲೇಷ ಬಲಿ ಕಾರ್ಯಕ್ರಮಗಳು ಭಕ್ತಿಭಾವ ಮತ್ತು ಧಾರ್ಮಿಕ ವೈಭವದೊಂದಿಗೆ ನೆರವೇರಿದವು.

ನಿನ್ನೆ ಸಂಜೆ 5 ಗಂಟೆಯಿಂದ ದೇವತಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಈ ವೇಳೆ ಶ್ರೀ ನಾಗದೇವರಿಗೆ ಪಂಚವಿಂಶತಿ (25) ಕಲಶ ಸ್ಥಾಪನೆ, ನವಗ್ರಹಾರಾಧನೆ ಹಾಗೂ ಸಪರಿವಾರ ಶ್ರೀ ರಾಮಚಂದ್ರ ದೇವರಿಗೆ ಅಷ್ಟೋತ್ತರ ಶತ (108) ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ ನೆರವೇರಿತು.

ಇಂದು ಬೆಳಿಗ್ಗೆ 6 ಗಂಟೆಗೆ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡು ನಾಗಶಿಲಾ ಪ್ರತಿಷ್ಠೆ ಜರುಗಿತು. ಬೆಳಿಗ್ಗೆ 7:35ಕ್ಕೆ ಸಪರಿವಾರ ಶ್ರೀರಾಮಚಂದ್ರ ದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಗಣಹೋಮ, ಬ್ರಹ್ಮ ಕುಂಭಾಭೀಷೇಕ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಿತು.

ಬೆಳಿಗ್ಗೆ 10:30ಕ್ಕೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಭಕ್ತರನ್ನು ಆಶೀರ್ವದಿಸಿದರು.ಇಂದು ಸಂಜೆ 6 ಗಂಟೆಯಿಂದ ಶ್ರೀ ನಾಗದೇವರಿಗೆ ಆಶ್ಲೇಷಾಬಲಿ ಹಾಗೂ ಅನ್ನಸಂತರ್ಪಣೆ ನಡೆಯಿತು.

ನಾಳೆ ಬೆಳಿಗ್ಗೆ 7:45ಕ್ಕೆ ಪ್ರತೀ ಏಳು ವರ್ಷಗಳಿಗೊಮ್ಮೆ ನಡೆಯುವ 10ನೇ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಆರಂಭವಾಗಲಿದೆ.

ಇನ್ನು ಫೆಬ್ರವರಿ 24ರಂದು ದುರ್ಗಾಹೋಮ ಹಾಗೂ ಫೆಬ್ರವರಿ 28ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.