Home Latest ರಸ್ತೆಗೇ ಅಂಗನವಾಡಿ ಮೆಟ್ಟಿಲು : ಮಕ್ಕಳು, ಗರ್ಭಿಣಿ, ಬಾಣಂತಿ, ಕಿಶೋರಿ, ಗೃಹಲಕ್ಷ್ಮೀಯರಿಗೆ ನೆರವು : ಕಪ್ಪಂದಕರ್ಯ...

ರಸ್ತೆಗೇ ಅಂಗನವಾಡಿ ಮೆಟ್ಟಿಲು : ಮಕ್ಕಳು, ಗರ್ಭಿಣಿ, ಬಾಣಂತಿ, ಕಿಶೋರಿ, ಗೃಹಲಕ್ಷ್ಮೀಯರಿಗೆ ನೆರವು : ಕಪ್ಪಂದಕರ್ಯ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ…!!

ಮೂಡುಬೆಳ್ಳೆ: ಇಲ್ಲಿನ ಕಟ್ಟಿಂಗೇರಿ ಗ್ರಾಮದ ಕಪ್ಪಂದಕರ್ಯದಲ್ಲಿನ ಅಂಗನವಾಡಿ ಕಟ್ಟಡವು ಶಿಥಿಲಗೊಂಡಿದ್ದು, ಅಡುಗೆ ಮನೆ ಮಳೆಗಾಲದಲ್ಲಿ ಸೋರುತ್ತಿದೆ. ಹಿಂದೆ ಇನ್ನೊಂದು ಬದಿಯಲ್ಲಿದ್ದ ರಸ್ತೆಯನ್ನು ಯಾವುದೇ ಮುಂದಾಲೋಚನೆ ನಡೆಸದೆ ಅಂಗನವಾಡಿಗೆ ತಾಗಿಯೇ ನಿರ್ಮಿಸಿರುವುದರಿಂದ ಅಂಗನವಾಡಿ ಮೆಟ್ಟಿಲುಗಳು ರಸ್ತೆಗೆ ತಾಗಿಕೊಂಡಿದ್ದು ಮಕ್ಕಳ ಸುರಕ್ಷತೆಗೆ ಆತಂಕ ಎದುರಾಗಿದೆ. ವಿಬಿಜಿ ರಾಮ್ ಜಿ (ಹಿಂದಿನ ನರೇಗಾ) ಯೋಜನೆಯಡಿಯಲ್ಲಿ ಅಂಗನವಾಡಿ ಕಟ್ಟಡ, ಅಡುಗೆ ಕೋಣೆ ನಿರ್ಮಾಣಕ್ಕೆ ಅವಕಾಶ ಇದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಅಂಗನವಾಡಿ ಕಟ್ಟಡಕ್ಕೆ ಕಾಯಕಲ್ಪ ಒದಗಿಸಲು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆವರಣ ಗೋಡೆ ನಿರ್ಮಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ.

ಗೋಡೆಗೆ ಬಿರುಕು:
ಅಂಗನವಾಡಿ ಕಟ್ಟಡವು ೧೯೯೭-೯೮ರಲ್ಲಿ ನಿರ್ಮಾಣವಾಗಿದ್ದರೂ ಶಿಥಿಲಗೊಂಡಿದ್ದು, ಗೋಡೆ ಬಿರುಕುಬಿಟ್ಟಿದೆ. ವಿಷ ಜಂತುಗಳ ಉಪಟಳವೂ ಇದೆ. ಹೊಸ ಕಟ್ಟಡ ನಿರ್ಮಾಣ ಮತ್ತು ಆವರಣ ಗೋಡೆ ರಚನೆಗೆ ಈಗಾಗಲೇ ೨೭.೧೦.೨೦೨೬ರಂದು ನಡೆದ ಬಾಲವಿಕಾಸ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಜಮೀನು ಮಂಜೂರಿಗೆ ಅರ್ಜಿ:
ಕಪ್ಪಂದಕರ್ಯ ಅಂಗನವಾಡಿ ಕೇಂದ್ರ ಇರುವ ಜಮೀನು ಸರಕಾರಿ ಜಮೀನು (ಕಟ್ಟಿಂಗೇರಿ ಗ್ರಾಮದ ಸನಂ ೨೦೮/೧) ಆಗಿದ್ದು ಈ ಒಟ್ಟು ೫.೩೪ ಎಕ್ರೆ ಜಮೀನಿನ ಪೈಕಿ ೫೦ ಸೆಂಟ್ಸು ಜಮೀನನ್ನು ಅಂಗನವಾಡಿ ಕೇಂದ್ರಕ್ಕೆ ಮೀಸಲಿಡಬೇಕು. ಉಳಿಕೆ ಜಮೀನನ್ನು ನಿವೇಶನ ರಹಿತ ಬಡ ಕುಟುಂಬಗಳಿಗೆ ಹಂಚಿಕೆ ಮಾಡಬೇಕು ಎಂದು ನಾಗರಿಕ ಸಮಿತಿ ಅರ್ಜಿ ಸಲ್ಲಿಸಿದೆ.

ಅಂಗನವಾಡಿ ಕೇಂದ್ರವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯರ ಅಚ್ಚುಮೆಚ್ಚಿನ ಕೇಂದ್ರವಾಗಿದೆ. ೬ ವರ್ಷದ ವರೆಗಿನ ಮಕ್ಕಳ ಆರೈಕೆ, ಕಿಶೋರಿಯರ, ಗರ್ಭಿಣಿಯರ, ಬಾಣಂತಿಯರ ಯೋಗಕ್ಷೇಮ, ಸ್ತ್ರೀಶಕ್ತಿ, ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ, ಪೋಷಣ್ ಅಭಿಯಾನ, ಗೃಹಲಕ್ಷ್ಮೀ, ಪಲ್ಸ್‌ಪೋಲಿಯೋ ಯೋಜನೆಗಳ ಯಶಸ್ವಿ ಅನುಷ್ಠಾನದ ಜತೆಗೆ ಅಂಗನವಾಡಿ ಕಾರ್ಯಕರ್ತೆ ಬಿಎಲ್‌ಒ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

“ಅಂಗನವಾಡಿ ಕೇಂದ್ರದ ಅಭಿವೃದ್ಧಿ, ಆವರಣ ಗೋಡೆ ರಚನೆ ಬಗ್ಗೆ ಸಾರ್ವಜನಿಕರಿಂದ ಮನವಿ ಸ್ವೀಕೃತವಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು‌” ಎಂದು
ಪ್ರೇಮ್ ಮೂರ್ತಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರು ತಿಳಿಸಿದ್ದಾರೆ.