ಉಡುಪಿ: ನಗರದ ಹಳೆ ತಾಲೂಕು ಕಚೇರಿ ಬಳಿಯಿರುವ ಹಳೆ ಕಾರಾಗೃಹದಲ್ಲಿ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.ಮೃತ ವ್ಯಕ್ತಿ ಸುಮಾರು ಹತ್ತು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದ್ದು, ಯಾವುದೋ ಕಾಯಿಲೆಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೃತರ ಹೆಸರು ಹಾಗೂ ವಿಳಾಸದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೃತರ ವಾರಸುದಾರರು ಉಡುಪಿ ನಗರ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಸ್ಥಳದಿಂದ ತೀವ್ರ ದುರ್ವಾಸನೆ ಬೀರುತ್ತಿದ್ದ ಮೃತದೇಹವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ತೆರವುಗೊಳಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.
ಉಡುಪಿ ನಗರ ಪೊಲೀಸ್ ಠಾಣೆಯ ಎಸ್ಐ ರತ್ನಾಕರ ಹಾಗೂ ಸಿಬ್ಬಂದಿಗಳಾದ ಆನಂದ ಗಾಣಿಗ ಮತ್ತು ಎಲ್ಲಾಲಿಂಗ, ಪ್ರಸನ್ನ ಅವರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಪ್ರಕ್ರಿಯೆ ನಡೆಸಿದರು.



