Home Crime ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಪ್ರಕರಣ : ಆರೋಪಿ ಅರೆಸ್ಟ್…!!

ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಪ್ರಕರಣ : ಆರೋಪಿ ಅರೆಸ್ಟ್…!!

ಉಡುಪಿ: ಉದ್ಯಮಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ಕೋಟ್ಯಾಂತರ ರೂ. ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಹೇಮಂತ ಪೂಜಾರಿಗೆ ಸಹಕರಿಸಿದ್ದ ಆರೋಪಿಯನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣೆಯಲ್ಲಿ 5, ಶಿರ್ವದಲ್ಲಿ 1, ಕಾಪುನಲ್ಲಿ 1 ಮತ್ತು ಮಣಿಪಾಲದಲ್ಲಿ 1 ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಉದ್ಯಮಿಗಳಿಗೆ ಕರೆ ಮಾಡಿ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಹೇಮಂತ ಪೂಜಾರಿ ಬೆದರಿಕೆ ಹಾಕಿದ್ದ.

ತನಿಖೆ ಮುಂದುವರಿಸಿದ ಪೊಲೀಸರು, ಸಂತ್ರಸ್ತ ಉದ್ಯಮಿಗಳ ಮೊಬೈಲ್ ನಂಬರ್ ಮತ್ತು ಇತರ ಮಾಹಿತಿಗಳನ್ನು ಹೇಮಂತ ಪೂಜಾರಿಗೆ ನೀಡಿ ಕೃತ್ಯದಲ್ಲಿ ಭಾಗಿಯಾದ ಸುರೇಶ್ ಅಮೀನ್ (38), ತಂದೆ ದಿ. ಭೋಜ ಅಮೀನ್, ವಾಸ ಬಟ್ರತೋಟ ಹೌಸ್, ಎರ್ಮಾಳು ಬಡಾ ಗ್ರಾಮ, ಕಾಪು ತಾಲೂಕು ಈತನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಆರೋಪಿ ಸುರೇಶ್ ಅಮೀನ್ ಮತ್ತು ಹೇಮಂತ ಪೂಜಾರಿ, ಬೇಡಿಕೆ ಹಣ ನೀಡದ ಮತ್ತು ಫೋನ್ ರಿಸೀವ್ ಮಾಡದ ಒಬ್ಬ ಉದ್ಯಮಿಯನ್ನು ಕೊಲೆ ಮಾಡಲು ಸಂಚು ರೂಪಿಸಿರುವುದು ತಾಂತ್ರಿಕ ಸಾಕ್ಷ್ಯದಿಂದ ತಿಳಿದುಬಂದಿದೆ. ಈ ಕೃತ್ಯಕ್ಕಾಗಿ ಹೇಮಂತ ಪೂಜಾರಿ ಸುರೇಶ್ ಅಮೀನ್‌ಗೆ ಕಳುಹಿಸಿದ್ದ 5 ಲಕ್ಷ ರೂ. ಪೈಕಿ ಖರ್ಚು ಮಾಡಿ ಉಳಿದ 4,13,000 ರೂ.ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಬಳಿಕ ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.