ಕಾಪು: ತನಗೆ ಕ್ಯಾನ್ಸರ್ ಇದೆ ಎಂದು ಚೀಟಿ ಬರೆದಿಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನ ಉದ್ಯಾವರದಲ್ಲಿ ಸಂಭವಿಸಿದೆ.
ಮೃತರನ್ನು ಅಭಿಷೇಕ್ ಕಾಂಚನ್ (34) ಎಂದು ತಿಳಿಯಲಾಗಿದೆ. ಇವರು ವಿಭದೇಶನಗರ, ಬೊಳ್ಜೆ, ಉದ್ಯಾವರ ನಿವಾಸಿ. ಮಣಿಪಾಲ ಪ್ರೆಸ್ನಲ್ಲಿ ಮಷೀನ್ ಆಪರೇಟಿಂಗ್ ಉದ್ಯೋಗ ಮಾಡಿಕೊಂಡಿದ್ದರು ಎನ್ನಲಾಗಿದೆ.
ಬೆಳಿಗ್ಗೆ 6:00 ಗಂಟೆಗೆ ಅಭಿಷೇಕ್ ಅವರ ಅಣ್ಣ ಅವಿನಾಶ್ ಕಾಂಚನ್ (37) ಮಾಹೆಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದರು. ಅಭಿಷೇಕ್ ಬೆಳಿಗ್ಗೆ 8:00 ಗಂಟೆಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿ, 9:00 ಗಂಟೆಗೆ ಮನೆಗೆ ವಾಪಸ್ ಬಂದಿದ್ದರು. ಆ ಬಳಿಕ ಚಿಕ್ಕಮ್ಮ ಜಯಂತಿ ಅವರು ಉದ್ಯಾವರ ಪೋಸ್ಟ್ ಆಫೀಸ್ಗೆ ಹೋಗಿ, ಕೆಲಸ ಮುಗಿಸಿ ವಾಪಸ್ ಮನೆಗೆ ಬಂದು ನೋಡಿದಾಗ ಬೆಳಿಗ್ಗೆ ಸುಮಾರು 10:15 ಗಂಟೆಗೆ ಮನೆಯ ಸ್ಟೋರ್ ರೂಮ್ನಲ್ಲಿ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಭಿಷೇಕ್ ಅವರ ಪರ್ಸ್ನಲ್ಲಿ ಒಂದು ಚೀಟಿ ಪತ್ತೆಯಾಗಿದ್ದು, ಅದರಲ್ಲಿ “ನನಗೆ ಕ್ಯಾನ್ಸರ್ ಇದ್ದ ಕಾರಣ ನಾನು ಸಾಯುತ್ತಿದ್ದೇನೆ” ಎಂದು ಬರೆದು ಸಹಿ ಮಾಡಿ ಇಟ್ಟಿದ್ದರು. ಅಭಿಷೇಕ್ಗೆ ಕ್ಯಾನ್ಸರ್ ಇರುವ ವಿಷಯ ದೂರುದಾರರಿಗೂ ಹಾಗೂ ಮನೆಯವರಿಗೂ ತಿಳಿದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



