Home Karkala News ನ.14ರಂದು ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆ ಬೇಡಿಕೆ ಆಗ್ರಹಿಸಿ ಹಕ್ಕೊತ್ತಾಯ ಸಭೆ…!!

ನ.14ರಂದು ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆ ಬೇಡಿಕೆ ಆಗ್ರಹಿಸಿ ಹಕ್ಕೊತ್ತಾಯ ಸಭೆ…!!

ಕಾರ್ಕಳ: ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆಯುತ್ತಿರುವ ಸಾವಿರಾರು ಕಕ್ಷಿದಾರರ ಅಮೂಲ್ಯ ಸಮಯ ಮತ್ತು ಭಾರಿ ಪ್ರಮಾಣದ ವೆಚ್ಚವನ್ನು ಹಾಗೂ ಶ್ರಮವನ್ನು ತಪ್ಪಿಸುವ ನಿಟ್ಟಿನಲ್ಲಿ ಮತ್ತು ಕರಾವಳಿ ಜನರ ಅನುಕೂಲಕ್ಕಾಗಿ ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ನ. 14ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಹಕ್ಕೊತ್ತಾಯ ಸಭೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕರಾವಳಿ ಹೈಕೋರ್ಟ್‌ ಪೀಠ ಹೋರಾಟ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಪ್ರೇಮ್‌ ಪ್ರಸಾದ್‌ ಶೆಟ್ಟಿ ಮನವಿ ಮಾಡಿದರು.

ಅವರು ಗುರುವಾರ ಕಾರ್ಕಳ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸುಮಾರು 80 ಲಕ್ಷ ಜನಸಂಖ್ಯೆಯಿದೆ. ಇಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗುವುದು ಮಹತ್ವದ ವಿಚಾರ. ಇಲ್ಲಿ ಪೀಠ ಸ್ಥಾಪನೆಯಾದಲ್ಲಿ ಕೇವಲ ವಕೀಲರಿಗೆ ಮಾತ್ರವಲ್ಲ, ಸಮಸ್ತ ಕರಾವಳಿ ಜನತೆಗೆ ಅನುಕೂಲವಾಗುವುದು. ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆದಾಟ ಮಾಡುವ ಸಮಯ, ಹಣ ಉಳಿತಾಯವಾಗುವುದು. ಪ್ರಾದೇಶಿಕವಾಗಿ ಹೈಕೋರ್ಟ್ ಪೀಠ ಕಾರ್ಯಾಚರಿಸುವುದರಿಂದ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಯಂತ್ರವು ಮತ್ತಷ್ಟು ಜಾಗರೂಕತೆಯಿಂದ, ಚುರುಕಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದರು.

ಕರಾವಳಿ ಭಾಗದ ಬಹುದಿನಗಳ ಈ ಬೇಡಿಕೆಯನ್ನು ಪರಿಶೀಲಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು 2026ರ ಸೆ. 29ರಂದು ತ್ರಿಸದಸ್ಯ ನ್ಯಾಯಾಧೀಶರ ಸಮಿತಿ (ನ್ಯಾಯಮೂರ್ತಿ ಅನು ಶಿವರಾಮನ್, ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್) ರಚಿಸಿರುವುದು ಸ್ವಾಗತಾರ್ಹ ಎಂದು ಪ್ರೇಮ್‌ ಪ್ರಸಾದ್‌ ಅಭಿಪ್ರಾಯಪಟ್ಟರು.
ಉಡುಪಿಯು ಕರಾವಳಿ ಜಿಲ್ಲೆಗಳಿಗೆ ಕೇಂದ್ರ ಸ್ಥಾನದಲ್ಲಿದ್ದು ನೆರೆಯ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ತಾಲೂಕುಗಳಿಗೂ ಸಂಪರ್ಕ ಹೊಂದಿದೆ. ಆದ್ದರಿಂದ ಉದ್ದೇಶಿತ ಸಂಚಾರಿ/ಶಾಶ್ವತ ಹೈಕೋರ್ಟ್ ಪೀಠವನ್ನು ಉಡುಪಿ ಜಿಲ್ಲೆಯಲ್ಲೇ ಸ್ಥಾಪಿಸಬೇಕೆಂಬುದು ಸಮಿತಿಯ ಬಲವಾದ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ಹಾಗೂ ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಲು ಕಾರ್ಕಳದಲ್ಲಿ ಬೃಹತ್ ಹಕ್ಕೊತ್ತಾಯ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್, ಕಾರ್ಯದರ್ಶಿ ಪದ್ಮಪ್ರಸಾದ್‌ ಜೈನ್‌ ಮಾತನಾಡಿ, ನಾಡಿನ ಮತ್ತು ಜಿಲ್ಲೆಯ ಹಿತದೃಷ್ಟಿಯಿಂದ ನ. 14ರಂದು ನಡೆಯಲಿರುವ ಈ ಹಕ್ಕೊತ್ತಾಯ ಸಭೆಯಲ್ಲಿ ಸರ್ವ ಪಕ್ಷ, ಎಲ್ಲ ವರ್ಗದ ಜನತೆ, ಸಂಘ, ಸಂಸ್ಥೆಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡರು.