ಮಂಗಳೂರು: ಬಟ್ಟೆ ಖರೀದಿಸಿಕೊಂಡು ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ 23 ವರ್ಷದ ನರ್ಸ್ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿಯನ್ನು ನಿಖಿತ (23) ಎಂದು ಗುರುತಿಸಲಾಗಿದೆ. ಇವರು ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಎ.ಬಿ. ಶೆಟ್ಟಿ ಸರ್ಕಲ್ ಬಳಿಯ ಡಾ. ಎಂ.ವಿ. ಶೆಟ್ಟಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು.
ನವೆಂಬರ್ 13ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ತಾಯಿಯ ಬಳಿ ಬಟ್ಟೆ ಖರೀದಿಸಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ನಿಖಿತ, ಬಳಿಕ ಮನೆಗೆ ವಾಪಸಾಗಿಲ್ಲ. ಅಲ್ಲದೆ, ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.
ಕುಟುಂಬಸ್ಥರು ಸ್ನೇಹಿತರ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ನಿಖಿತ ಅವರ ಅಕ್ಕ ನಯನ ಅವರು ಅದೇ ದಿನ ರಾತ್ರಿ 10 ಗಂಟೆಗೆ ಬರ್ಕೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ನಾಪತ್ತೆಯಾದ ಯುವತಿಯ ಚಹರೆ:
- ಹೆಸರು: ನಿಖಿತ (23)
- ಎತ್ತರ: 5.1 ಅಡಿ
- ಮೈಬಣ್ಣ: ಗೋದಿ ಮೈಬಣ್ಣ
- ಮೈಕಟ್ಟು: ಸಾಧಾರಣ
- ಮುಖ: ದುಂಡು ಮುಖ
- ಭಾಷೆಗಳು: ಕನ್ನಡ, ತುಳು, ಇಂಗ್ಲಿಷ್
- ಧರಿಸಿದ್ದ ಉಡುಪು: ಬಿಳಿ ಬಣ್ಣದ ಚೂಡಿದಾರ್ ಮತ್ತು ಕಪ್ಪು ಬಣ್ಣದ ಲೆಗ್ಗಿನ್ ಪ್ಯಾಂಟ್
- ವಿದ್ಯಾಭ್ಯಾಸ: ಪ್ಯಾರಾಮೆಡಿಕಲ್ ನರ್ಸಿಂಗ್
ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



