ಸುಬ್ರಹ್ಮಣ್ಯ, ಅ.16: ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ವಧೆಗಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪಿಎಸ್ಐ ಆಂಜನೇಯ ರೆಡ್ಡಿ ಅವರು ಸರ್ಕಲ್ ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಕುಲ್ಕುಂದ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಎಎಸ್ಐ ಸೀತಾರಾಮ ಗೌಡ ಅವರು ರಾತ್ರಿ 4:50ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸುಬ್ರಹ್ಮಣ್ಯ ಕಡೆಯಿಂದ ಬಂದ KA-13-C-3446 ನಂಬರಿನ ಬೊಲೆರೋ ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಕಪ್ಪು ಬಣ್ಣದ ಹಸು ಮತ್ತು ಕಪ್ಪು ಬೂದು ಮಿಶ್ರಿತ ಬಣ್ಣದ ಹೋರಿ ಸೇರಿ ಎರಡು ಜಾನುವಾರುಗಳಿದ್ದವು. ಸಾಗಾಟಕ್ಕೆ ಯಾವುದೇ ಪರವಾನಿಗೆ ಇರಲಿಲ್ಲ.
ಚಾಲಕನನ್ನು ವಿಚಾರಿಸಿದಾಗ ಆತ ತನ್ನ ಹೆಸರು ಆನಂದ ಎಲ್.ಎಸ್ (31), ಅರಕಲಗೂಡು ತಾಲೂಕು, ಹಾಸನ ಜಿಲ್ಲೆ ಎಂದು ಹೇಳಿದ್ದಾನೆ. ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಸುಳ್ಯ ತಾಲೂಕಿನ ಮಡಪ್ಪಾಡಿ ಆಡಿಕಲ್ಲು ಗಂಗಾಧರ ಮತ್ತು ದೊಡ್ಡತೋಟದ ಧನಂಜಯ ಅವರ ಮನೆಯಿಂದ ಖರೀದಿಸಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ವಾಹನದಲ್ಲಿದ್ದ ಇತರ ಇಬ್ಬರು ಸಚಿನ್ ಮತ್ತು ಕೀರ್ತೇಶ್, ಇಬ್ಬರೂ ಅರಕಲಗೂಡು ತಾಲೂಕಿನವರು ಎಂದು ತಿಳಿದುಬಂದಿದೆ.
ವಶಪಡಿಸಿಕೊಂಡ ವಸ್ತುಗಳು ಹಸು ಅಂದಾಜು ಮೌಲ್ಯ 15,000 ರೂ,ಹೋರಿ – ಅಂದಾಜು ಮೌಲ್ಯ 10,000 ರೂ,ಬೊಲೆರೋ ಪಿಕಪ್ ವಾಹನ – ಅಂದಾಜು ಮೌಲ್ಯ 1.50 ಲಕ್ಷ ರೂ ಎಂದು ತಿಳಿಯಲಾಗಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 36/2026, ಕಲಂ 4,5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ 2020, ಕಲಂ 11(ಡಿ) ಪ್ರಾಣಿ ಹಿಂಸಾ ತಡೆ ಕಾಯ್ದೆ 1960 ಮತ್ತು ಕಲಂ 66, 192(A), 66 IMV ಆಕ್ಟ್ 1988 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.




