ಮಂಗಳೂರು: ನಗರದ ಬರ್ಕೆ ಸಮೀಪ ಗಾಂಜಾ ಮಾರಾಟ ಮಾಡಲು ನಿಂತಿದ್ದ ಠಾಣಾ ರೌಡಿ ಆಸಾಮಿಯನ್ನು ಬರ್ಕೆ ಪೊಲೀಸರು ಬಂಧಿಸಿ, 231 ಗ್ರಾಂ ಗಾಂಜಾ ಸಹಿತ 76,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಶ್ರೇಯಸ್ (36) ಶಿವನಗರ, ಮೂಡುಶೆಡ್ಡೆ ನಿವಾಸಿ ಎಂದು ಗುರುತಿಸಲಾಗಿದೆ.
ರಾತ್ರಿ 8:30ಕ್ಕೆ ಪೊಲೀಸ್ ಉಪ ನಿರೀಕ್ಷಕ ಗುರಪ್ಪಕಾಂತಿರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ಗಾಗಿ ಹೊರಟು, ಉರ್ವ ಮಾರ್ಕೇಟ್ ಕಡೆಯಿಂದ ಸುಲ್ತಾನ್ ಬತ್ತೇರಿ ರಸ್ತೆಯಾಗಿ ಸುಲ್ತಾನ್ ಬತ್ತೇರಿಯ ಫೆರಿ ಪಾಯಿಂಟ್ ಪಾರ್ಕಿಂಗ್ ಬಳಿಗೆ ರಾತ್ರಿ 9:15ಕ್ಕೆ ತಲುಪಿದಾಗ, ಪರಿಚಯವಿರುವ ಠಾಣಾ ರೌಡಿ ಆಸಾಮಿ ಶ್ರೇಯಸ್ ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ.
ಆತನನ್ನು ಕೂಲಂಕುಷವಾಗಿ ವಿಚಾರಿಸಿದಾಗ, ತಾನು ಸ್ಕೂಟರ್‌ನ ಸೀಟ್‌ನ ಕೆಳಭಾಗದ ಟೂಲ್ಸ್ ಬಾಕ್ಸ್‌ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡಲು ಈ ಸ್ಥಳದಲ್ಲಿ ನಿಂತಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಂತರ ಶ್ರೇಯಸ್‌ನಿಂದ ಬೀಜ, ಎಲೆ ಮತ್ತು ಕಾಂಡದಿಂದ ಕೂಡಿದ 231 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಅಂದಾಜು ಮೌಲ್ಯ 11,500 ರೂ., ಒಪ್ಪೋ ಕಂಪನಿಯ ಮೊಬೈಲ್ ಫೋನ್ ಅಂದಾಜು ಮೌಲ್ಯ 5,000 ರೂ. ಮತ್ತು ಸ್ಕೂಟರ್ ಅಂದಾಜು ಮೌಲ್ಯ 60,000 ರೂ. ಸೇರಿದಂತೆ ಒಟ್ಟು 76,500 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



