ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ…
ಮಣಿಪಾಲ: ಉಡುಪಿ ಜಿಲ್ಲೆಯ ಶೈಕ್ಷಣಿಕ ಹಾಗೂ ವಾಣಿಜ್ಯ ಕೇಂದ್ರವಾಗಿರುವ ಮಣಿಪಾಲದಲ್ಲಿ ತಡರಾತ್ರಿ ಯುವಕರ ಗುಂಪೊಂದು ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಸಂಭವಿಸಿದೆ.
ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದ ಯುವಕರ ನಡುವೆ ಆರಂಭವಾದ ಜಗಳ ಬಳಿಕ ವಿಕೋಪಕ್ಕೆ ತಿರುಗಿದ್ದು, ಮೊದಲು ಇಬ್ಬರ ನಡುವೆ ಆರಂಭವಾದ ಹೊಡೆದಾಟ ನಂತರ ಎರಡು ಗುಂಪುಗಳ ನಡುವಿನ ಮಾರಾಮಾರಿಗೆ ಕಾರಣವಾಗಿದೆ. ಜನಸಂಚಾರ ಹೆಚ್ಚಿರುವ ರಸ್ತೆಯ ಮಧ್ಯೆಯೇ ಯುವಕರು ಕೈ ಕೈ ಮಿಲಾಯಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವಿಶೇಷವೆಂದರೆ, ಮಣಿಪಾಲ ಪೊಲೀಸ್ ಠಾಣೆಯಿಂದ ಕೆಲವೇ ಅಂತರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಣಿಪಾಲದಲ್ಲಿ ಪಬ್ಗಳು ಹಾಗೂ ಬಾರ್ಗಳ ಮುಂದೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ನಿಗದಿತ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿದ್ದ ಬಾರ್ ಮತ್ತು ರೆಸ್ಟೋರೆಂಟ್ಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇದೀಗ ತಡರಾತ್ರಿಯವರೆಗೂ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಬಾರ್, ಪಬ್ ಹಾಗೂ ರೆಸ್ಟೋರೆಂಟ್ಗಳ ಒಳಗೆ ನಡೆಯುತ್ತಿದ್ದ ಗಲಾಟೆಗಳು ಇದೀಗ ನಡುಬೀದಿಗೆ ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯುವಕರ ಹೊಡೆದಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಣಿಪಾಲದಲ್ಲಿ ತಡರಾತ್ರಿ ನಡೆಯುತ್ತಿರುವ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







