Home Crime ಉಡುಪಿಯಲ್ಲಿ ಶಿಕ್ಷಕಿಯ ಮನೆಗೆ ಕನ್ನ ಹಾಕಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು...

ಉಡುಪಿಯಲ್ಲಿ ಶಿಕ್ಷಕಿಯ ಮನೆಗೆ ಕನ್ನ ಹಾಕಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕಳವು…!!

ಉಡುಪಿ: ಶಿಕ್ಷಕಿಯೊಬ್ಬರ ಮನೆಯ ಬೀಗ ಒಡೆದು ಸುಮಾರು ₹12 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಕಳವು ಮಾಡಿರುವ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಡಂಕೂರು ಪುತ್ತೂರು ಗ್ರಾಮದ ಲಲಿತ ನಿವಾಸದ ನಿವಾಸಿ, ಮೈಸೂರು ಜಿಲ್ಲೆಯ ಹೂನಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ಶಶಿರೇಖಾ ಬಿ. ಅವರು ಬೇಸಿಗೆ ರಜೆಯಲ್ಲಿ ಊರಿಗೆ ಬಂದಿದ್ದರು. ಬಳಿಕ ಮೇ 25ರಂದು ರಾತ್ರಿ ಸುಮಾರು 9 ಗಂಟೆಗೆ ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದರು.

ಆಗಸ್ಟ್ 9ರಂದು ರಾತ್ರಿ ಸುಮಾರು 10:30ಕ್ಕೆ ಪತಿ ಹಾಗೂ ಮನೆಯವರೊಂದಿಗೆ ವಾಪಸ್‌ ಬಂದಾಗ ಮನೆಯೊಳಗಿನ ಬೆಡ್‌ರೂಂಗಳ ಕಬೋರ್ಡ್‌ಗಳು ಮತ್ತು ಬೀರುಗಳ ಬಾಗಿಲು ತೆರೆದಿರುವುದು ಹಾಗೂ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಎಳೆದು ಹಾಕಿರುವುದು ಕಂಡುಬಂದಿದೆ.

ಪರಿಶೀಲಿಸಿದಾಗ, ಕಳ್ಳರು ಮನೆಯ ಪ್ರವೇಶದ್ವಾರವನ್ನು ಯಾವುದೋ ಆಯುಧದಿಂದ ಮೀಟಿ ತೆರೆಯಲು ಪ್ರಯತ್ನಿಸಿ, ಬಳಿಕ ಮನೆಯ ದಕ್ಷಿಣ ಭಾಗದ ಗೋಡೆಯನ್ನು ಹತ್ತಿ ಟೆರೇಸ್ ಮೇಲಿನ ಬಾಗಿಲನ್ನು ಮೀಟಿ ತೆರೆದು ಮನೆಯೊಳಗೆ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ.

ಕಳ್ಳರು ಬೆಡ್‌ರೂಂನ ಕಬೋರ್ಡ್‌ನಲ್ಲಿದ್ದ ಸುಮಾರು 100 ಗ್ರಾಂ ತೂಕದ ಚಿನ್ನದ ಸರ, ಚಿನ್ನದ ಕಾಯಿನ್‌ಗಳು, ಮತ್ತೊಂದು ಬೆಡ್‌ರೂಂನಲ್ಲಿದ್ದ ವಿವಿಧ ಬೆಳ್ಳಿ ವಸ್ತುಗಳು ಹಾಗೂ ದೇವರ ಕೋಣೆಯಲ್ಲಿದ್ದ ಬೆಳ್ಳಿ ದೀಪಗಳು, ಹರಸಿನ-ಕುಂಕುಮ ಬಟ್ಟಲು, ಬೆಳ್ಳಿ ಕಾಲುಚೈನ್ ಸೇರಿದಂತೆ ಒಟ್ಟು 1 ಕೆಜಿ 650 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ.

ಇದರ ಜೊತೆಗೆ ಮನೆಯಲ್ಲಿದ್ದ ₹40 ಸಾವಿರ ನಗದನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ₹12 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.