Home Crime ಉಪ್ಪಿನಂಗಡಿ: ಕೋಳಿ ಅಂಕ ಜೂಜಾಟ ಅಡ್ಡೆ ಮೇಲೆ ದಾಳಿ – 4 ಮಂದಿ ವಶಕ್ಕೆ…!!

ಉಪ್ಪಿನಂಗಡಿ: ಕೋಳಿ ಅಂಕ ಜೂಜಾಟ ಅಡ್ಡೆ ಮೇಲೆ ದಾಳಿ – 4 ಮಂದಿ ವಶಕ್ಕೆ…!!

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಅಡಂಕಿಲ ಪಲ್ಕೆ ಗುಡ್ಡದಲ್ಲಿ ಅಕ್ರಮ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ.

ಅ.31 ರಂದು ಸಂಜೆ 6:45ಕ್ಕೆ ಬೀಟ್ ಪೊಲೀಸ್ ಪಿಸಿ 2488 ಲಿಂಗರಾಜು ಅವರಿಗೆ ಬಾತ್ಮೀದಾರರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಎಸ್‌ಐ ದಾಮೋದರ ನಾಯ್ಕ ನೇತೃತ್ವದಲ್ಲಿ ಪಿಸಿ 2380 ಮೋಹನ, ಪಿಸಿ 2510 ಶ್ಯಾಮ್‌ರಾಯ್, ಪಿಸಿ 2350 ಚಿದಾನಂದ ಅವರನ್ನೊಳಗೊಂಡ ತಂಡ ಪಂಚಾಯತುದಾರರೊಂದಿಗೆ ಸಂಜೆ 7:15ಕ್ಕೆ ಸ್ಥಳಕ್ಕೆ ತೆರಳಿದೆ.

ಸ್ಥಳದಲ್ಲಿ ಸಾರ್ವಜನಿಕ ಗುಡ್ಡದಲ್ಲಿ ಜನರ ಗುಂಪು ಕೋಳಿಗಳ ಕಾಲಿಗೆ ಬಾಲು ಕಟ್ಟಿ ಕೋಳಿ ಅಂಕ ಜೂಜಾಟ ನಡೆಸುತ್ತಿರುವುದು ಕಂಡುಬಂದಿದ್ದು, ದಾಳಿ ನಡೆಸಿ 4 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳು 1) ಅನಿಲ್, 2) ಸುರೇಶ, 3) ಯಶೋಧರ, 4) ನಿಶಾಂತ್ ಎಂದು ಗುರುತಿಸಲಾಗಿದೆ.

ವಶಪಡಿಸಿಕೊಂಡ ಸೊತ್ತುಗಳು ಕೆಂಪು-ಕಪ್ಪು ಬಣ್ಣದ ಕುಪ್ಪುಳು ಜಾತಿ ಹುಂಜ – 1 (ಅಂದಾಜು ರೂ. 500),ಕಪ್ಪು-ಕೆಂಪು ಬಣ್ಣದ ಹುಂಜ – 1 (ರೂ. 500),ಕೋಳಿ ಕಾಲಿಗೆ ಕಟ್ಟಿದ್ದ ಬಾಲುಗಳು – 2 (ರೂ. 100),ನೈಲಾನ್ ಹಗ್ಗ – 2, ನೈಲಾನ್ ಚೀಲ – 1 ಎಂದು ತಿಳಿದು ಬಂದಿದೆ.

ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.