Home Latest ಪ್ರದೀಪ್ ಪೂಜಾರಿ ಸಾವಿಗೆ ನ್ಯಾಯ ಬೇಕು – ಮಣಿಪಾಲದಲ್ಲಿ ನೂರಾರು ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ…!!

ಪ್ರದೀಪ್ ಪೂಜಾರಿ ಸಾವಿಗೆ ನ್ಯಾಯ ಬೇಕು – ಮಣಿಪಾಲದಲ್ಲಿ ನೂರಾರು ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ…!!

ಮಣಿಪಾಲ: ಉಡುಪಿ ಜಿಲ್ಲೆಯ ಪೆರ್ಡೂರಿನ ಹಿಂದೂ ಕಾರ್ಯಕರ್ತ ಪ್ರದೀಪ್ ಪೂಜಾರಿ (28) ಆತ್ಮಹತ್ಯೆ ಪ್ರಕರಣದ ಉನ್ನತಮಟ್ಟದ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮಣಿಪಾಲದಲ್ಲಿ ಬೃಹತ್ ಪ್ರತಿಭಟನೆ ಇಂದು ನಡೆದಿದೆ.

ಪ್ರತಿಭಟನಾಕಾರರು ಪ್ರದೀಪ್ ಪೂಜಾರಿ ಸಾವಿಗೆ ಕಾರಣರಾದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಪ್ರಕರಣವನ್ನು ವಿಶೇಷ ತನಿಖಾ ತಂಡ ಅಥವಾ ಉನ್ನತಮಟ್ಟದ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಅ.27 ರಂದು ಯುವತಿಯ ಮನೆ ಬಳಿ ಹಲ್ಲೆಗೊಳಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಪ್ರದೀಪ್, ಅ.30 ರಂದು ಆಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಹಲ್ಲೆ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಎಫ್‌ಐಆರ್ ದಾಖಲಾಗದೆ ಎನ್‌ಸಿ ಮಾತ್ರ ದಾಖಲಾಗಿತ್ತು ಎಂಬ ಆರೋಪವಿದೆ. ಈ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಸ್‌ಐ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಮಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೂ ಎಲ್ಲ ಆರೋಪಿಗಳ ಬಂಧನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಲೆಗೊಳಗಾದ ಪ್ರದೀಪ್‌ಗೆ ನ್ಯಾಯ ದೊರಕಿಸಿಕೊಡದಿದ್ದರೆ ಜಿಲ್ಲಾದ್ಯಂತ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಲಾಯಿತು.

ಈ ಹಿನ್ನೆಲೆಯಲ್ಲಿ ಬಿಲ್ಲವ ಯುವ ವೇದಿಕೆಯ ಪ್ರವೀಣ್ ಪೂಜಾರಿ  ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಹಾಗೂ ಸಮುದಾಯದ ಮುಖಂಡರು ಈಗಾಗಲೇ ಎಸ್‌ಪಿ ಹರಿರಾಮ್ ಶಂಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದು, ಕರ್ತವ್ಯಲೋಪ ಎಸಗಿದ ಪೊಲೀಸರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರದೀಪ್ ಪೂಜಾರಿ ಸಾವು ಪ್ರಕರಣದಲ್ಲಿ ಆರೋಪಿಗಳ ಬಂಧನ ವಿಳಂಬವಾಗುತ್ತಿರುವ ಬಗ್ಗೆ ಮಾಜಿ ಶಾಸಕ ರಘುಪತಿ ಭಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆಗೆ ಗಡುವು ನೀಡಿದ್ದಾರೆ.

ಇಂದು ಸಂಜೆ 4 ಗಂಟೆಯೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿ ಪೊಲೀಸ್ ಇಲಾಖೆಯ ತಾಕತ್ತು ತೋರಿಸಬೇಕು ಎಂದು ರಘುಪತಿ ಭಟ್ ಸವಾಲು ಹಾಕಿದ್ದಾರೆ.

ಪ್ರದೀಪ್ ಪೂಜಾರಿ ಮೇಲೆ ಹಲ್ಲೆ ನಡೆದು ಆತ್ಮಹತ್ಯೆಗೆ ಶರಣಾಗಿ ದಿನಗಳು ಕಳೆದರೂ ಇನ್ನೂ ಎಲ್ಲ ಆರೋಪಿಗಳು ಬಂಧನವಾಗಿಲ್ಲ. ಪೊಲೀಸರು 5 ವಿಶೇಷ ತಂಡ ರಚಿಸಿದ್ದರೂ ಕ್ರಮ ನಿಧಾನವಾಗಿದೆ. ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳು ಮಾತ್ರ ವಶಕ್ಕೆ ಪಡೆದಿರುವುದು ಸಾಕಾಗುವುದಿಲ್ಲ. ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಪ್ರಕರಣದಲ್ಲಿ ಹಿರಿಯಡ್ಕ ಪೊಲೀಸರ ಕರ್ತವ್ಯಲೋಪದ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಮೃತ ಪ್ರದೀಪ್ ಕುಟುಂಬಕ್ಕೆ ನ್ಯಾಯ ಸಿಗಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.