Home Crime ಮಂಗಳೂರು: ಅಕ್ರಮ ಮರಳು ಸಾಗಾಟ ಪತ್ತೆ : ಪಿಕಪ್ ವಾಹನ ವಶಕ್ಕೆ…!!

ಮಂಗಳೂರು: ಅಕ್ರಮ ಮರಳು ಸಾಗಾಟ ಪತ್ತೆ : ಪಿಕಪ್ ವಾಹನ ವಶಕ್ಕೆ…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಡಂಕುದ್ರುವಿನ ನೇತ್ರಾವತಿ ದಕ್ಕೆಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ದಿನಾಂಕ 13-10-2026ರ ಮಧ್ಯರಾತ್ರಿ ಸುಮಾರು 12:25ರ ವೇಳೆಗೆ ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಯೋಗೇಶ್ವರನ್ ಪಿ. ಅವರು ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ನೇತ್ರಾವತಿ ಸೇತುವೆ ದಾಟಿ ಚಾಪೆಲ್ ಚರ್ಚ್ ಬಳಿ ತೆರಳುತ್ತಿದ್ದಾಗ, ಅಡಂಕುದ್ರುವಿನ ನೇತ್ರಾವತಿ ದಕ್ಕೆಯ ಕಡೆಯಿಂದ ಬಂದ ಪಿಕಪ್ ವಾಹನದ ಚಾಲಕ ಪೊಲೀಸ್ ಜೀಪನ್ನು ಕಂಡ ತಕ್ಷಣ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.

ಇದರಿಂದ ಸಂಶಯಗೊಂಡ ಪೊಲೀಸರು ವಾಹನವನ್ನು ಹಿಂಬಾಲಿಸಿದ್ದು, ಅಡಂಕುದ್ರು ಬಳಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಚಾಲಕ ಕೀ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಬಳಿಕ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ, ಅದರಲ್ಲಿ ಮರಳು ತುಂಬಿಸಿರುವುದು ಪತ್ತೆಯಾಗಿದೆ. KA-20-AC-9227 ನೋಂದಣಿ ಸಂಖ್ಯೆಯ ಪಿಕಪ್ ವಾಹನದಲ್ಲಿ ಸುಮಾರು ₹5,000 ಮೌಲ್ಯದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಹಾಗೂ ಸರ್ಕಾರಕ್ಕೆ ರಾಜಧನ ಪಾವತಿಸದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಮಾರು ₹2 ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಚಾಲಕ ಹಾಗೂ ವಾಹನದ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.