Home Crime ಮಂಗಳೂರು: ಗುತ್ತಿನ ಪೂಜೆಯ ಮನೆಯಲ್ಲಿ ಕಳ್ಳತನ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು...

ಮಂಗಳೂರು: ಗುತ್ತಿನ ಪೂಜೆಯ ಮನೆಯಲ್ಲಿ ಕಳ್ಳತನ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಕಳವು…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪದವು ಗ್ರಾಮದ ಕುಲಶೇಖರ ಸಿಲ್ವರ್ ಗೇಟ್ ಬಳಿಯ ಅಂಚನ್ ಕುಟುಂಬಸ್ಥರ ಗುತ್ತಿನ ಪೂಜೆ ಮಾಡುವ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.

ದಿನಾಂಕ 2026ರ ಅಕ್ಟೋಬರ್ 21ರ ಮಧ್ಯಾಹ್ನ 2 ಗಂಟೆಯಿಂದ ಅಕ್ಟೋಬರ್ 22ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮನೆಯಲ್ಲಿದ್ದ 2 ಪವನ್ ಚಿನ್ನದ ಸರ, ಚಿನ್ನದ ಬಳೆ, ಕರಿಮಣಿ, ಚಿನ್ನದ ಉಂಗುರ, 7 ಚಿನ್ನದ ಮೂಗುತಿಗಳು ಹಾಗೂ ಅರ್ಧ ಪವನ್‌ನ ಎರಡು ಚಿನ್ನದ ನಾಣ್ಯಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಇದಲ್ಲದೆ, 2 ಕೆ.ಜಿ. 500 ಗ್ರಾಂ ತೂಕದ ಬೆಳ್ಳಿಯ ಗಟ್ಟಿ, ಬೆಳ್ಳಿಯ ತಟ್ಟೆಗಳು, ಲೋಟಗಳು, ಗಿಂಡಿ, ಸೊಂಟದ ಪಟ್ಟಿ, ನಾಲ್ಕು ಬೆಳ್ಳಿಯ ಬಳೆಗಳು, ದೈವದ ಅಣಿಯ ನಾಲ್ಕು ಸಣ್ಣ ಬೆಳ್ಳಿ ಸೆಟ್‌ಗಳು ಹಾಗೂ ಕಾಣಿಕೆ ಡಬ್ಬಿಯನ್ನೂ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಳವಾದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹8 ಲಕ್ಷ ಎಂದು ತಿಳಿದುಬಂದಿದೆ.

ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ವರದಿಯಾಗಿದೆ. ಪೊಲೀಸರು ತನಿಖೆ ಕಾರ್ಯ ‌ಮುಂದುವರೆಸಿದ್ದಾರೆ.