Home Crime ಉಪ್ಪಿನಂಗಡಿ: ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ಕೂಲಿ ಕಾರ್ಮಿಕ ಚಿಕಿತ್ಸೆ ಫಲಿಸದೆ ಮೃತ್ಯು…!!

ಉಪ್ಪಿನಂಗಡಿ: ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ಕೂಲಿ ಕಾರ್ಮಿಕ ಚಿಕಿತ್ಸೆ ಫಲಿಸದೆ ಮೃತ್ಯು…!!

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ತೆಂಗಿನಕಾಯಿ ತೆಗೆಯಲು ಮರ ಹತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರನ್ನು ರಮೇಶ (33) ಎಂದು ತಿಳಿದು ಬಂದಿದೆ.

ರಮೇಶನು ತೋಟದ ಕೂಲಿ ಕೆಲಸ ಮಾಡಿಕೊಂಡಿದ್ದು, ಅವನಿಗೆ ಮದುವೆಯಾಗಿರಲಿಲ್ಲ. ದಿನಾಂಕ 23-11-2026 ರಂದು ರಮೇಶನು ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಬಾಂಬಿಲ ಎಂಬಲ್ಲಿ ಮಹಮ್ಮದ್ ಕುಂಞಿ ಎಂಬವರಿಗೆ ಸೇರಿದ ತೋಟದಲ್ಲಿ ಅಬೂಬಕ್ಕರ್ ರವರ ಜೊತೆ ತೆಂಗಿನಕಾಯಿ ತೆಗೆಯಲು ಹೋಗಿದ್ದನು.

ರಮೇಶನು ತೆಂಗಿನ ಮರಕ್ಕೆ ಹತ್ತಿ ತೆಂಗಿನಕಾಯಿ ತೆಗೆಯುವ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಆಕಸ್ಮಿಕವಾಗಿ ಕೈ ಜಾರಿ ತೆಂಗಿನ ಮರದಿಂದ ಬಿದ್ದು ತೀವ್ರ ಗಾಯಗೊಂಡಿದ್ದನು. ಆತನನ್ನು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು.

ಆದರೆ ರಮೇಶನು ಚಿಕಿತ್ಸೆಗೆ ಸ್ಪಂದಿಸದೇ ಬೆಳಿಗ್ಗೆ 11:48 ಗಂಟೆಗೆ ಮೃತಪಟ್ಟಿದ್ದಾನೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.