ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿ ನಿವಾಸಿ ಕೆ. ಸಿ. ವರ್ಗೀಸ್ (73) ಅವರ ಸಾವು ಕೊಲೆ ಎಂದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತರ ಪುತ್ರ ಸೇರಿ ಮೂವರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಮೃತ ವರ್ಗೀಸ್ ಅವರ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಲ್ಲೆಯಿಂದ ಉಂಟಾದ ತೀವ್ರ ಗಾಯಗಳೇ ಸಾವಿಗೆ ಕಾರಣ ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ.
ಬಂಧಿತರನ್ನು ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಹಾಗೂ ಮೃತರ ಪುತ್ರ ಕೆ. ವಿ. ಥಾಮಸ್ ಅಲಿಯಾಸ್ ವಿಲ್ಸನ್, ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ನಿವಾಸಿ ಸಿ. ಟಿ. ರಾಜು ಅಲಿಯಾಸ್ ವರ್ಗೀಸ್ ಮತ್ತು ನೆಲ್ಯಾಡಿಯ ಚಾಕೊಚ್ಚ ಎಂದು ತಿಳಿಯಲಾಗಿದೆ.
ಘಟನೆ ಸುಮಾರು ಆರು ದಿನಗಳ ಹಿಂದೆ ನಡೆದಿತ್ತು. ಆರಂಭದಲ್ಲಿ ಮೃತರ ಪುತ್ರ ಕೆ. ವಿ. ಥಾಮಸ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ವಿಧಿವಿಜ್ಞಾನ ತಂಡದ ಸಹಾಯದಿಂದ ಪರಿಶೀಲನೆ ಕೈಗೊಂಡಿದ್ದರು.
ಮೃತದೇಹದ ಮರಣೋತ್ತರ ಪರೀಕ್ಷೆ ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆದಿದ್ದು, ತಲೆಗೆ ತೀವ್ರವಾಗಿ ಬಿದ್ದ ಗಾಯಗಳೇ ಸಾವಿಗೆ ಕಾರಣ ಎಂಬುದು ವರದಿಯಿಂದ ದೃಢಪಟ್ಟಿದೆ. ನಂತರದ ತನಿಖೆಯಲ್ಲಿ ಇದು Just ಪ್ರಕರಣವೆಂದು ಸಾಬೀತಾಗಿದೆ.
ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



