ಉಡುಪಿ: ಗೂಗಲ್ ಮ್ಯಾಪ್ ಸೂಚನೆಯ ಯಡವಟ್ಟಿನಿಂದ ಕಾರೊಂದು ಆವೆ ಮಣ್ಣಿನ ಹೊಂಡಕ್ಕಿ ಹೊಳೆಗೆ ಬೀಳುವ ಸ್ಥಿತಿಗೆ ತಲುಪಿದ ಘಟನೆ ಶುಕ್ರವಾರ ರಾತ್ರಿ ಕೋಟ ಸಾಹೇಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಲಾಡಿಯಲ್ಲಿ ಬದಿಯಲ್ಲಿ ಸಂಭವಿಸಿದೆ.
ಕೇರಳ ಮೂಲದ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೇರವಾಗಿ ಸಂಚರಿಸುವ ಬದಲಿಗೆ ಗೂಗಲ್ ಮ್ಯಾಪ್‌ನಲ್ಲಿ ತೋರಿದ ಡೈವರ್ಶನ್ ಅನುಸರಿಸಿ ಬ್ರಹ್ಮಾವರ ಬಾರ್ಕೂರು ಮಾರ್ಗವಾಗಿ ಸಾಹೇಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು.
ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ಹೊಳೆ ಬದಿಯ ಸಿಮೆಂಟ್ ಪಿಲ್ಲರ್ ಮೇಲೆ ಹತ್ತಿ ನಿಂತಿದೆ. ಆವೆ ಮಣ್ಣಿನ ಹೊಂಡಕ್ಕೆ ಕೇವಲ ಒಂದು ಅಡಿ ಅಂತರದಲ್ಲಿ ಕಾರು ನಿಂತಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ.
ಕಾರಿನಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಕೋಟ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



