ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ವಾಕ ಗ್ರಾಮದ ಕುಂಬ್ಲಾಡಿಯಲ್ಲಿರುವ ಶ್ರೀ ಕುಕ್ಕೆನಾಥ ಬಾಲ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಜೂನ್ 27ರಂದು ಅಕ್ರಮವಾಗಿ ಮರಳು ಸಂಗ್ರಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಕ್ರಮ ಮರಳು ದಾಸ್ತಾನು ಮಾಡಿರುವ ಕುರಿತು ಬಂದ ಮಾಹಿತಿಯ ಮೇರೆಗೆ ಕಡಬ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ, ದೇವಸ್ಥಾನದ ಆವರಣದಲ್ಲಿ ಸುಮಾರು ಒಂದು ಟಿಪ್ಪರ್ ಲೋಡ್‌ನಷ್ಟು ಮರಳು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ವಶಪಡಿಸಿಕೊಂಡ ಮರಳಿನ ಅಂದಾಜು ಮೌಲ್ಯ ₹10 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ದೇವಸ್ಥಾನದ ಅಧ್ಯಕ್ಷ ಗಣೇಶ್ ಅವರು, ದೇವಸ್ಥಾನದ ದುರಸ್ತಿ ಕಾಮಗಾರಿಗಾಗಿ ಸಮೀಪದ ಕುಮಾರಧಾರ ನದಿಯಿಂದ ಯಾವುದೇ ಪರವಾನಿಗೆ ಪಡೆಯದೆ ಮರಳನ್ನು ಸಂಗ್ರಹಿಸಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಪಂಚರ ಸಮಕ್ಷಮ ಮಹಜರು ಮೂಲಕ ವಶಪಡಿಸಿಕೊಂಡು, ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 80/2026 ದಾಖಲಿಸಲಾಗಿದೆ. ಪ್ರಕರಣವನ್ನು MMCR-1994ರ ಕಲಂ 44, MMRD-1957ರ ಕಲಂ 4(1), 4(1A), 21(1)(A) ಹಾಗೂ BNS-2023ರ ಕಲಂ 303(2)ರಡಿ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




