ಉಡುಪಿ : ಹಣ ಹೂಡಿಕೆ ಮಾಡಿದರೆ ದ್ವಿಗುಣ ಲಾಭ ದೊರೆಯುತ್ತದೆ ಎಂದು ನಂಬಿಸಿ 30.90 ಲಕ್ಷ ರೂ. ವಂಚನೆ ಎಸಗಿದ ಆರೋಪದಡಿ ನಾಲ್ವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ ಆಚಾರ್ಯ, ಜ್ಯೋತಿ ಜತ್ತನ್, ದಮಯಂತಿ ಎ. ಹಾಗೂ ರೋಹಿಣಿ ಎಂಬವರು 2026ರ ಜೂನ್ 19ರಂದು ಕೋಡಿ ಗ್ರಾಮದ ಇಂದಿರಾ ಬಂಗೇರ ಅವರ ಮನೆಗೆ ಭೇಟಿ ನೀಡಿ, ಮಲ್ಪೆಯ ಕಾರ್ತಿಕ್ ಸಹಜ್ ಕಟ್ಟಡದಲ್ಲಿರುವ ಬಿ.ಜಿ. ವೆಲ್ತ್ ಶೇರಿಂಗ್ ಸಂಸ್ಥೆಯ ಮೂಲಕ ಷೇರು ಮಾರುಕಟ್ಟೆ ವ್ಯವಹಾರ ನಡೆಸುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ.
ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣವಾಗುತ್ತದೆ. ಇದು ವಿದೇಶಿ ಕಂಪನಿಯಾಗಿದ್ದು, ಒಮ್ಮೆ ಮಾತ್ರ ಹೂಡಿಕೆ ಮಾಡಿದರೆ ಡಾಲರ್ ರೂಪದಲ್ಲಿ ಐಡಿ ತೆರೆದು ಹೂಡಿಕೆ ಮಾಡಲಾಗುತ್ತದೆ ಎಂದು ನಂಬಿಸಿದ್ದಾರೆ ಎನ್ನಲಾಗಿದೆ. ಈ ಮಾತುಗಳನ್ನು ನಂಬಿದ ಇಂದಿರಾ ಬಂಗೇರ, ಅವರ ಕುಟುಂಬ ಸದಸ್ಯರು ಹಾಗೂ ಇತರರು ಒಟ್ಟು 30.90 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ಬಳಿಕ ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸದೆ, ಸಂಸ್ಥೆಯ ಕಚೇರಿಯನ್ನು ಮುಚ್ಚಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರದೀಪ್ ಆಚಾರ್ಯ ಈ ಹಿಂದೆ ಮಂಗಳೂರು ಸೇರಿದಂತೆ ಕೆಲವು ಕಡೆ ಹೂಡಿಕೆ ಹೆಸರಿನಲ್ಲಿ ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಆರೋಪ ಇದೆ. ಮಂಗಳೂರಿನಲ್ಲಿ ಕೊಡ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ಈ ಮೂಲಕ ದೂರುದಾರರು ಹಾಗೂ ಇತರರಿಗೆ ನಂಬಿಕೆದ್ರೋಹ ಮತ್ತು ವಂಚನೆ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





