Home Karnataka News ಆರೆಸ್ಸೆಸ್ ನೋಂದಣಿ ಆಗುವವರೆಗೂ ಬಿಡುವುದೇ ಇಲ್ಲ : ಪ್ರಿಯಾಂಕ್ ಖರ್ಗೆ…!

ಆರೆಸ್ಸೆಸ್ ನೋಂದಣಿ ಆಗುವವರೆಗೂ ಬಿಡುವುದೇ ಇಲ್ಲ : ಪ್ರಿಯಾಂಕ್ ಖರ್ಗೆ…!

ಬೆಂಗಳೂರು : ಆರೆಸ್ಸೆಸ್ ಹಿಂದೆ ಬಹುದೊಡ್ಡ ಹಣ ಅಕ್ರಮ ವರ್ಗಾವಣೆ ದಂಧೆ (ಮನಿ ಲಾಂಡರಿಂಗ್) ಇದೆ. ಹೀಗಾಗಿ, ಕಾನೂನು, ಸಂವಿಧಾನದಡಿ ಈ ಸಂಘಟನೆ ನೋಂದಣಿ ಆಗುವವರೆಗೂ ನಾನು ಈ ವಿಚಾರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದ ಗಾಂಧಿ ಭವನ ಸಭಾಂಗಣದಲ್ಲಿ ಅಹರ್ನಿಶಿ ಪ್ರಕಾಶನ ಸಹಯೋಗದೊಂದಿಗೆ ಏರ್ಪಡಿಸಿದ್ದ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಬರೆದಿರುವ ‘ಕರಾವಳಿಯ ರಕ್ತ-ಕಣ್ಣೀರು’ (ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಸಂಘಟನೆಯೊಂದಿಗೆ ಸರಿ ಸುಮಾರು 2500 ಸಹ ಸಂಘಟನೆಗಳು ಜತೆಯಾಗಿವೆ. ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಇದನ್ನು ಗಮನಿಸಿದರೆ, ಆರೆಸ್ಸೆಸ್ ಹಿಂದೆ ಬಹುದೊಡ್ಡ ಹಣ ಅಕ್ರಮ ವರ್ಗಾವಣೆ ದಂಧೆ(ಮನಿ ಲಾಂಡರಿಂಗ್) ಇದೆ ಎಂದು ಹೇಳಬಹುದು ಎಂದರು.

ಆರೆಸ್ಸೆಸ್‌ನ ಹಣದ ಮೂಲ ಪ್ರಶ್ನೆ ಮಾಡಿದರೆ ನಮಗೆ ಗುರು ದಕ್ಷಣೆ ಬರುತ್ತದೆ ಎಂದು ತಿಳಿಸುತ್ತಾರೆ. ಆದರೆ, ನಾನು ಅಧ್ಯಯನ ನಡೆಸಿದಾಗ ಇವರ ಪ್ರಕಾರ ಗುರು ದಕ್ಷಣೆ ಎಂದರೆ ‘ಧ್ವಜ’ ಎಂದರ್ಥ. ಹಾಗಾದರೆ, ನಾಳೆ ಬೆಳಗ್ಗೆ ನಾನು ಸಹ ನೀಲಿ ಧ್ವಜ ಹಾರಿಸಿ ಹಣ ವಸೂಲಿ ಮಾಡಿದರೆ, ಸರಕಾರ, ಇವರು(ಆರೆಸ್ಸೆಸ್) ಒಪ್ಪುತ್ತಾರೆಯೇ ಎಂದು ಕೇಳುತ್ತೇನೆ. ಹೀಗೆ, ಆಧಾರ ರಹಿತ ಮಾತುಗಳಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂದೆ ಈ ಆರೆಸ್ಸೆಸ್ ಸಂಘಟನೆ ಸಂವಿಧಾನ, ಕಾನೂನು ಅಡಿಯಲ್ಲಿ ನೋಂದಣಿ ಆಗುವರೆಗೂ ನಾನು ಬಿಡುವ ಮಾತೇ ಇಲ್ಲ ಎಂದು ಅವರು ಹೇಳಿದರು.

ವಾಲ್ಮೀಕಿ ಬರೆದ ರಾಮಾಯಣವೇ ಬೇರೆ, ಈಗ ನಡೆಯುತ್ತಿರುವುದೇ ಬೇರೆ. ರಾಜಕಾರಣಿಗಳು, ಧಾರ್ಮಿಕ ಗುರುಗಳು ತಮಗೆ ಬೇಕಾದಂತೆ ಧರ್ಮದ ಕುರಿತು ಮಾತನಾಡುತ್ತಿದ್ದಾರೆ. ಯಾವ ಧರ್ಮವೂ ಹಿಂಸೆ ಪ್ರಚೋದಿಸಲ್ಲ. ಮೂರು-ಮೂರು ಮಕ್ಕಳನ್ನು ಹೆರಬೇಕು ಎನ್ನುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ ಮದುವೆ ಆಗಲ್ಲ. ಆದರೂ, ಬೇರೆಯವರ ಮಕ್ಕಳನ್ನು ಎತ್ತಿಕಟ್ಟುವ ಮಾತು ಹೇಳುತ್ತಾರೆ. ಹೀಗೆ, ಬಿಜೆಪಿಯವರು ಹೊರಗೊಂದು, ಒಳಗೊಂದು ಮಾತುಗಳನ್ನು ನಿತ್ಯ ಹೇಳಿ ಬಡವರ ಮಕ್ಕಳನ್ನು ಬೀದಿಪಾಲು ಮಾಡುತ್ತಿದ್ದಾರೆ ಎಂದು ಹೇಳಿದರು.

ನಟ ಕಿಶೋ‌ರ್ ಕುಮಾರ್ ಮಾತನಾಡಿ, ಇಂದು ಶಿವರಾತ್ರಿ. ಶಿವ ವಿಷವನ್ನು ಗಂಟಲಲ್ಲಿ ಇರಿಸಿಕೊಂಡವನು. ಶಿವನನ್ನೇ ವಿಷ ಹರಡಲು ಬಳಸಲಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಈ ಪುಸ್ತಕ ಭರವಸೆಯಾಗಿದೆ. ಸಿನಿಮಾ ನಟನಾಗಿ ಎಲ್ಲೆಲ್ಲಾ ಧನಿ ಎತ್ತಲು ಸಾಧ್ಯವೋ ಅಲ್ಲಿ ಎತ್ತುತ್ತೇನೆ. ರಕ್ತದಲ್ಲಿರುವ ಕಣ್ಣೀರನ್ನು ದಾಖಲಿಸುವುದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಪ್ರಕಾಶಕಿ ಮಂಜುಳ ಹುಂಚದಕಟ್ಟೆ ಇದ್ದರು.