ಉಡುಪಿ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲು ತುಳು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಾಗೂ ಕಾರ್ಕಳದಲ್ಲಿ ಸುಸಜ್ಜಿತ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಶನಿವಾರ (ಜೂ.13) ಸಿಎಂ ಭೇಟಿಯಾಗಿ ಮಾತನಾಡಿದ ಉದಯ್ ಶೆಟ್ಟಿ, ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೂಡಲೇ ‘ತುಳು ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸಬೇಕು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪ್ರಾಚಿನ ದ್ರಾವಿಡ ಭಾಷೆ ಇದಾಗಿದೆ. ಲಕ್ಷಾಂತರ ಜನರ ಮಾತೃಭಾಷೆಯೂ ಆಗಿದ್ದು, ತುಳುನಾಡಿನ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ. ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಭಾಷೆಗಳ ಬಳಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ತುಳು ಭಾಷೆಯ ಸಂರಕ್ಷಣೆ ಅತ್ಯಗತ್ಯ ಎಂದರು.
ಈಗಾಗಲೇ ಯುನೆಸ್ಕೋ ಕೂಡ ತುಳು ಭಾಷೆಯನ್ನು ಸಂರಕ್ಷಿಸಬೇಕಾದ ಭಾಷೆಯೆಂದು ಪರಿಗಣಿಸಿದೆ. ತುಳು ಅಭಿವೃದ್ಧಿ ಪ್ರಾಧಿಕಾರ ರಚಿಸಿದರೆ ಭಾಷೆಯ ಸಂರಕ್ಷಣೆ, ಪ್ರಚಾರ, ತುಳು ಸಾಹಿತ್ಯ, ಸಂಶೋಧನೆಗಳಿಗೆ ಉತ್ತೇಜನ ಲಭಿಸುತ್ತದೆ. ಶಾಲೆ ಮತ್ತು ಕಾಲೇಜುಗಳಲ್ಲಿ ತುಳು ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹವೂ ಲಭಿಸುತ್ತದೆ. ತುಳು ಜಾನಪದ ಕಲೆ, ಯಕ್ಷಗಾನ, ಭೂತಾರಾಧನೆ ಹಾಗೂ ಇತರ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆ, ತುಳು ಭಾಷೆಗೆ ಸಾಂವಿಧಾನಿಕ ಹಾಗೂ ಶೈಕ್ಷಣಿಕ ಮಾನ್ಯತೆ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ತುಳು ಭವನ ನಿರ್ಮಿಸುವಂತೆ ಸಿಎಂ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದೇನೆ. ಕಾರ್ಕಳವು ತುಳುನಾಡಿನ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದ್ದು ಇಲ್ಲಿ ತುಳು ಭಾಷೆ, ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಹಾಗೂ ಇತರ ಜನಪದ ಕಲೆಗಳು ಇಂದಿಗೂ ಜೀವಂತವಾಗಿವೆ. ಅವೆಲ್ಲವುಗಳ ಸಂರಕ್ಷಣೆ, ಅಧ್ಯಯನ ಮತ್ತು ಪ್ರಚಾರಕ್ಕಾಗಿ ಕಾರ್ಕಳದಲ್ಲಿ ತುಳು ಭವನದ ಅಗತ್ಯವಿದೆ ಎಂದು ಮನವರಿಕೆ ಮಾಡಿದ್ದೇನೆ. – ಉದಯ್ ಶೆಟ್ಟಿ ಮುನಿಯಾಲು. ಕಾರ್ಕಳದ ಕಾಂಗ್ರೆಸ್ ಮುಖಂಡ.




