ಕೊಲ್ಲೂರು: ಬೈಂದೂರು ತಾಲ್ಲೂಕಿನ ಜಡ್ಕಲ್ ಗ್ರಾಮದಲ್ಲಿ ತೋಟದ ಶೆಡ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಮೋಳಿ (70) ಅವರ ಪುತ್ರ ಸೇವಿಯರ್ ಸಿ.ಜೆ (49) ತೋಟದಲ್ಲಿರುವ ಶೆಡ್‌ನಲ್ಲಿ ಒಬ್ಬರೇ ವಾಸವಾಗಿದ್ದು, ಅವರ ಪತ್ನಿ ಕುಂದಾಪುರದ ಮಂಜುನಾಥ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಕ್ಕಳ ವಿದ್ಯಾಭ್ಯಾಸದ ನಿಮಿತ್ತ ಮಕ್ಕಳೊಂದಿಗೆ ಅಲ್ಲಿ ವಾಸವಾಗಿದ್ದರು.
ಮಾರ್ಚ್ 31ರಂದು ಬೆಳಿಗ್ಗೆ ಪಿರ್ಯಾದಿದಾರರೊಂದಿಗೆ ಮಾತನಾಡಿಕೊಂಡು ಕೆಲಸಕ್ಕೆ ತೆರಳಿದ್ದ ಸೇವಿಯರ್, ಏಪ್ರಿಲ್ 2ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ತಾಯಿಯವರು ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಹಬ್ಬದ ಪ್ರಯುಕ್ತ ಮನೆಗೆ ಬರಲು ಕರೆಸಲು ಶೆಡ್ ಬಳಿ ತೆರಳಿದಾಗ ದುರ್ವಾಸನೆ ಕಂಡುಬಂದಿದೆ. ಆತಂಕಗೊಂಡ ಅವರು ಮನೆಯವರೊಂದಿಗೆ ಒಳಗೆ ಹೋಗಿ ಪರಿಶೀಲಿಸಿದಾಗ, ಮಲಗುವ ಮಂಚದ ಬಳಿ ಕುಳಿತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತರು ಸುಮಾರು ಆರು ತಿಂಗಳ ಹಿಂದೆ ಎಡಕೈಗೆ ಗಾಯ ಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರೆಂದು ತಿಳಿದುಬಂದಿದ್ದು, ಚಿಕಿತ್ಸೆ ಪಡೆದಿದ್ದರು. ಮದ್ಯಪಾನದ ಚಟ ಹಾಗೂ ಕುಟುಂಬದಿಂದ ದೂರವಿರುವ ಕಾರಣದಿಂದ ಒಂಟಿತನ ಅನುಭವಿಸಿ ಮಾನಸಿಕವಾಗಿ ಕುಗ್ಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯ ಕುರಿತು ಅನುಮಾನ ವ್ಯಕ್ತಪಡಿಸಿರುವ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





