Home Crime ಕಾರ್ಕಳ: ಮಗನ ಮೇಲೆ ಕತ್ತಿಯಿಂದ ಹಲ್ಲೆ : ತಂದೆ ವಿರುದ್ಧ ಪ್ರಕರಣ ದಾಖಲು…!!

ಕಾರ್ಕಳ: ಮಗನ ಮೇಲೆ ಕತ್ತಿಯಿಂದ ಹಲ್ಲೆ : ತಂದೆ ವಿರುದ್ಧ ಪ್ರಕರಣ ದಾಖಲು…!!

ಕಾರ್ಕಳ: ಮನೆ ವಿಚಾರವಾಗಿ ನಡೆದ ಜಗಳದಲ್ಲಿ ತಂದೆಯೇ ಮಗನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರ್‌ ದುರ್ಗಾ ಗ್ರಾಮದ ಪುಲ್ಲಾಟ್‌ನಲ್ಲಿ ಸೆ.28ರ ರಾತ್ರಿ ನಡೆದಿದೆ.

65 ವರ್ಷದ ತ್ರೆಸಿಯಾಮ್‌ ನೀಡಿದ ದೂರಿನಂತೆ, ಅವರ ಮಗ ಚಾಲ್ಸ್‌ ಮದ್ಯಪಾನದ ಚಟ ಹೊಂದಿದ್ದು, ಹೊಸದಾಗಿ ನಿರ್ಮಿಸುತ್ತಿರುವ ಮನೆಯನ್ನು ತನಗೆ ಬಿಟ್ಟುಕೊಡುವಂತೆ ಜಗಳವಾಡಿದ್ದಾನೆ ಎನ್ನಲಾಗಿದೆ.

ಈ ವೇಳೆ ಜಗಳ ಬಿಡಿಸಲು ಬಂದ ತಂದೆ ಮಥಾಯ್‌ ಅವರನ್ನು ಚಾಲ್ಸ್‌ ತಳ್ಳಿದ್ದು, ಅವರು ಕೆಳಗೆ ಬಿದ್ದಿದ್ದಾರೆ. ಬಳಿಕ ಮನೆಯ ಶೆಡ್‌ ಬಳಿ ಕುಳಿತಿದ್ದ ಮಥಾಯ್‌ ಅವರೊಂದಿಗೆ ಮತ್ತೆ ಜಗಳವಾಗಿದ್ದು, ಕೋಪಗೊಂಡ ಅವರು ತೋಟದ ಕೆಲಸಕ್ಕೆ ಬಳಸುವ ಕತ್ತಿಯಿಂದ ಚಾಲ್ಸ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಚಾಲ್ಸ್‌ ಅವರ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಗಂಭೀರ ರಕ್ತಗಾಯವಾಗಿದ್ದು, ಸಂಬಂಧಿ ವಿಬಿನ್‌ ಅವರು ಆಂಬುಲೆನ್ಸ್‌ನಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.