ಮಂಡ್ಯ: ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಹಿಳೆ ಆರು ವರ್ಷಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾಳೆ. ಮಾಡದ ತಪ್ಪಿಗೆ ವ್ಯಕ್ತಿಯೊಬ್ಬರು ಸುಮಾರು ಎರಡೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯ ಪಾಂಡವರಪುರ ಎಂಬಲ್ಲಿ ನಡೆದಿದೆ.
ಪೊಲೀಸರು ಮಾಡಿದ ಎಡವಟ್ಟಿನಿಂದಾಗಿ ಅಮಾಯಕ ವ್ಯಕ್ತಿ ಜೈಲಿನಲ್ಲಿ ನರಕಯಾತನೆ ಅನುಭವಿಸಿದ್ದಾನೆ.
ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ನಿರಪರಾಧಿಯನ್ನು ಜೈಲಿಗಟ್ಟಿದ್ದರೋ ಇದೀಗ ಕೊಲೆಯಾಗಿದ್ದ ಮಹಿಳೆ ಜೀವಂತವಾಗಿ ಪ್ರತ್ಯಕ್ಷರಾಗಿದ್ದಾಳೆ. ಸದ್ಯ ಪೊಲೀಸರು ಮಾಡಿದ್ದ ಎಡವಟ್ಟು ಬಟಾಬಯಲಾಗಿದೆ. ಈ ಘಟನೆ ನಡೆದಿರೋದು ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ.
2019ರಲ್ಲಿ ಮಂಜು ಎಂಬ ಮಹಿಳೆ ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಗೆ ಮಂಜು ಎಂಬಾಕೆಯ ತಂದೆ ನಾಗರಾಜು ದೂರು ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸರು 2 ವರ್ಷದ ನಂತರ ರಾಜೇಶ್ ಎಂಬುವನ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿ ಜೈಲಿಗಟ್ಟಿದ್ದರು.
ಪಾಂಡವಪುರದ ರಾಗಿಮುದ್ದನಹಳ್ಳಿ ನಿವಾಸಿ ರಾಜೇಶ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು. ಮಹಿಳೆ ಮಂಜು ನಾಪತ್ತೆಯಾಗುವ ಮುನ್ನ ರಾಜೇಶ್ ಮೊಬೈಲ್ನಿಂದ ಕೊನೆಯ ಕರೆ ಮಾಡಿದ್ದರು. ಪಾಂಡವಪುರ ಬಸ್ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಸಿಕ್ಕ ರಾಜೇಶ್ ಮೊಬೈಲ್ನಿಂದ ಫೋನ್ ಕರೆ ಮಾಡಿದ್ದರು. ಕೊನೆಯ ಕರೆಯ ಅನುಮಾನದ ಮೇಲೆ ಕೊಲೆ ಪೊಲೀಸರು ರಾಜೇಶ್ ವಿರುದ್ಧ ಪ್ರಕರಣ ದಾಖಲಿಸಿ. ಬಳಿಕ ಆರೋಪಿಯನ್ನಾಗಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಪೊಲೀಸರ ಭಯಕ್ಕೆ ಮಾಡದ ತಪ್ಪನ್ನು ಒಪ್ಪಿಕೊಂಡಿದ್ದ ರಾಜೇಶ್ ಅಷ್ಟೇ ಅಲ್ಲದೇ ಪೊಲೀಸರು ರಾಜೇಶನಿಗೆ ಚಿತ್ರಹಿಂಸೆ ನೀಡಿ ಸ್ವಇಚ್ಛಾ ಹೇಳಿಕೆ ಪಡೆದಿದ್ದರು. ಅಂದಿನ ಪೊಲೀಸ್ ಅಧಿಕಾರಿ ಪ್ರಭಾಕರ್ ಎಂಬುವರು ಬೇಜವಾಬ್ದಾರಿ ತನಿಖೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬೂಟಿನಿಂದ ಒದ್ದು, ಕರೆಂಟ್ ಶಾಕ್ ನೀಡಿ, ಮನೆಯವರನ್ನು ಬಂಧಿಸುವುದಾಗಿ ಬೆದರಿಕೆ ಕೂಡ ಹಾಕಿದ್ದಾರಂತೆ.
ಪೊಲೀಸರ ಭಯಕ್ಕೆ ಮಾಡದ ತಪ್ಪನ್ನು ಒಪ್ಪಿಕೊಂಡಿದ್ದ ರಾಜೇಶ್. 2021 ರಿಂದ ಸುಮಾರು ಎರಡೂವರೆ ವರ್ಷ ಜೈಲುವಾಸ ಅನುಭವಿಸಿದ್ದರು.
ಕಳೆದ 2024 ಜನವರಿಯಲ್ಲಿ ರಾಜೇಶ್ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಆದ್ರೆ, ಇಷ್ಟಕ್ಕೆ ಸುಮ್ಮನೇ ಕೂರದ ರಾಜೇಶ್ ಹಾಗೂ ಅವರ ವಕೀಲರು ನಾಗಮಂಗಲದಲ್ಲಿ ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆಯನ್ನು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಮಹಿಳೆಯನ್ನು ಪತ್ತೆಹಚ್ಚಿದ ರಾಜೇಶ್ ಪರ ವಕೀಲರು ಬಿಂಡಿಗನವಿಲೆ ಪೊಲೀಸರ ವಶಕ್ಕೆ ಒಪ್ಪಿಸಿ, ಹೇಳಿಕೆ ದಾಖಲಿಸಿದ್ದಾರೆ. ಇಷ್ಟವಿಲ್ಲದ ಮದುವೆ ಮಾಡಿದ್ದ ಕಾರಣಕ್ಕೆ ಮನೆಬಿಟ್ಟು ಹೋಗಿದ್ದಾಗಿ ಮಂಜು ಹೇಳಿಕೆ ನೀಡಿದ್ದು, ಇದೀಗ ಮತ್ತೊಬ್ಬನನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದೇನೆ. ನನಗೂ ರಾಜೇಶನಿಗೂ ಪರಿಚಯವೇ ಇಲ್ಲ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ. ಒಟ್ಟಾರೆ, ಪೊಲೀಸರ ಬೇಜವಾಬ್ದಾರಿ ತನದಿಂದ ಏನೂ ತಪ್ಪು ಮಾಡದ ನಿರಪರಾಧಿ ವ್ಯಕ್ತಿಯೊಬ್ಬ ಎರಡೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಜೀವಂತವಾಗಿ ಮಹಿಳೆ ಪತ್ತೆಯಾಗಿರುವುದರಿಂದ ನನಗೆ ನ್ಯಾಯ ಸಿಗಬೇಕು ಎಂದು ರಾಜೇಶ್ ಒತ್ತಾಯಿಸಿದ್ದಾರೆ. ಸುಳ್ಳು ದೂರು ನೀಡಿದವರು ಮತ್ತು ತನಿಖೆ ನಡೆಸಿರುವ ಪೊಲೀಸರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ರಾಜೇಶ್ ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ.



