ಕಾಪು: ಅಡುಗೆ ಕೋಣೆಯಲ್ಲಿ ಚಹಾ ತಯಾರಿಸುತ್ತಿದ್ದ ವೇಳೆ ನೈಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ 69 ವರ್ಷದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಇನ್ನಂಜೆ ಗ್ರಾಮದ ಸುಮಿತ್ರ ಪೂಜಾರಿ (69) ಅವರು ಸೆ.18ರಂದು ಬೆಳಗ್ಗೆ ಎಂದಿನಂತೆ ಚಹಾ ತಯಾರಿಸಲು ಅಡುಗೆ ಕೋಣೆಗೆ ತೆರಳಿದ್ದರು. ಚಹಾ ಮಾಡಿ ವಾಪಸ್ ಬಂದ ವೇಳೆ ಅವರು ಧರಿಸಿದ್ದ ನೈಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕುತ್ತಿಗೆ, ಕೆನ್ನೆ, ಎದೆ ಹಾಗೂ ತೊಡೆಯ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದವು.
ತಕ್ಷಣ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೆ.21ರಂದು ರಾತ್ರಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.28ರಂದು ಮಧ್ಯಾಹ್ನ 1:20ಕ್ಕೆ ಸುಮಿತ್ರ ಪೂಜಾರಿ ಮೃತಪಟ್ಟಿದ್ದಾರೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




