ಉಡುಪಿ: ಉಡುಪಿ–ಮೂಡುಬೆಳ್ಳೆ–ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ‘ಶ್ರೀ ಕೃಷ್ಣಪ್ರಸಾದ್’ ಹೆಸರಿನ ಸಿಟಿ ಬಸ್‌ವೊಂದು ದೆಂದೂರುಕಟ್ಟೆಯ ಎಂಆರ್‌ಪಿಎಲ್ ಪೆಟ್ರೋಲ್ ಪಂಪ್ ಬಳಿ ಗುರುವಾರ ತಡರಾತ್ರಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಪ್ರತಿ ದಿನದಂತೆ ಬುಧವಾರ ರಾತ್ರಿ ಬಸ್‌ನ್ನು ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರವಾಗಿ ಆವರಿಸಿಕೊಂಡು ಬಸ್ ಸಂಪೂರ್ಣ ಸುಟ್ಟುಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಿಂದ ₹10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬಸ್‌ನ ಸಮೀಪವೇ ನಿಲ್ಲಿಸಲಾಗಿದ್ದ ಟೆಂಪೊವೊಂದಕ್ಕೂ ಬೆಂಕಿ ವ್ಯಾಪಿಸಿದ್ದು, ಸೆಕ್ಯುರಿಟಿ ಗಾರ್ಡ್ ಹಾಗೂ ಸ್ಥಳದಲ್ಲಿದ್ದವರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ಇದೇ ಪೆಟ್ರೋಲ್ ಪಂಪ್‌ನಲ್ಲಿ ಮತ್ತೊಂದು ಬಸ್ ಕೂಡ ನಿಲ್ಲಿಸಲಾಗಿದ್ದರೂ ಅದಕ್ಕೆ ಯಾವುದೇ ಹಾನಿಯಾಗಿಲ್ಲ. ಅದೃಷ್ಟವಶಾತ್ ಬೆಂಕಿ ಪೆಟ್ರೋಲ್ ಪಂಪ್‌ಗೆ ವ್ಯಾಪಿಸದೆ ನಿಯಂತ್ರಣಕ್ಕೆ ಬಂದಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬಸ್‌ಗೆ ಬೆಂಕಿ ತಗುಲಲು ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ನಡೆಯಬೇಕಿದೆ.




