Home Crime ಮಂಗಳೂರು: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಕಾರು ಡಿಕ್ಕಿ : ಸ್ಥಳದಲ್ಲೇ ಸಾವು…!!

ಮಂಗಳೂರು: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಕಾರು ಡಿಕ್ಕಿ : ಸ್ಥಳದಲ್ಲೇ ಸಾವು…!!

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟುತ್ತಿದ್ದ 71 ವರ್ಷದ ವೃದ್ಧನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಮೃತಪಟ್ಟ ಘಟನೆ ನಡೆದಿದೆ.

ರಾತ್ರಿ ಸುಮಾರು 8 ಗಂಟೆಗೆ ತಡಂಬೈಲ್ ಬಳಿಯ ಗರುಡಾ ಬಾರ್ ಎದುರು ಈ ಘಟನೆ ನಡೆದಿದೆ. ದುರ್ಗೋಜಿ ರಾವ್ (71) ಅವರು ತಮ್ಮ ಪುತ್ರಿ ಸ್ವಾತಿ ಹಾಗೂ ಮೊಮ್ಮಗಳು ಪ್ರಣಮ್ಯ ಅವರೊಂದಿಗೆ ಅತ್ತಾವರದಲ್ಲಿರುವ ಸ್ವಾತಿ ಅವರ ಪತಿ ಮನೆಗೆ ತೆರಳುವ ಸಲುವಾಗಿ ರಸ್ತೆ ದಾಟುತ್ತಿದ್ದರು.

ಈ ವೇಳೆ ಉಡುಪಿ ಕಡೆಯಿಂದ ಸುರತ್ಕಲ್ ಕಡೆಗೆ ಬರುತ್ತಿದ್ದ KA-03-ME-0849 ನೋಂದಣಿ ಸಂಖ್ಯೆಯ ಕಾರನ್ನು ಚಾಲಕ ಸಚೀನ್ ಎಂಬಾತ ದುಡುಕು ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ದುರ್ಗೋಜಿ ರಾವ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಯ ಡಿವೈಡರ್ ಮೇಲೆ ಬಿದ್ದ ದುರ್ಗೋಜಿ ರಾವ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಮುಖ ಹಾಗೂ ಎರಡೂ ಕಾಲುಗಳ ಮುಂಗಾಲಿನ ಭಾಗದಲ್ಲಿ ಗಾಯಗಳಾಗಿವೆ.

ಸ್ಥಳದಲ್ಲಿದ್ದ ಸ್ವಾತಿ ಹಾಗೂ ಸ್ಥಳೀಯರು ಗಾಯಾಳುವನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಘಟನೆ ಕುರಿತು ಮಂಗಳೂರು ಟ್ರಾಫಿಕ್ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.