Home Latest ಉಡುಪಿಯಲ್ಲಿ ವಿಟ್ಲಪಿಂಡಿ ವೈಭವಕ್ಕೆ ಸಾಕ್ಷಿಯಾದ ಭಕ್ತಸಾಗರ…!!

ಉಡುಪಿಯಲ್ಲಿ ವಿಟ್ಲಪಿಂಡಿ ವೈಭವಕ್ಕೆ ಸಾಕ್ಷಿಯಾದ ಭಕ್ತಸಾಗರ…!!

ಇದೇ ಪ್ರಥಮ ಭಾರಿಗೆ ಕೃಷ್ಣನೂರಿನಲ್ಲಿ ಮಲ್ಲಯುದ್ಧ ಆಯೋಜನೆ..

ರಥಬೀದಿಯಲ್ಲಿ ಕುಡಿಕೆ ಒಡೆಯುವ ಸಂಪ್ರದಾಯ; ಹುಲಿವೇಷಗಳ ಕಲರವ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯ ಕೃಷ್ಣಮಠದಲ್ಲಿ ಶನಿವಾರ ವಿಟ್ಲಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ಅಷ್ಟಮಿ ಹಬ್ಬ ಮೊದಲುಗೊಂಡು ಇಡೀ ದಿನ ಧಾರ್ಮಿಕ‌ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜಾಂಗಣ ಮತ್ತು ರಥಬೀದಿಯಲ್ಲಿ ನಡೆದವು.

ಇಂದು ಬೆಳಿಗ್ಗಿನಿಂದಲೇ ವಿಟ್ಲಪಿಂಡಿ ಉತ್ಸವಕ್ಕಾಗಿ ಮಠದತ್ತ ಸಾವಿರಾರು ಭಕ್ತರು ಆಗಮಿಸಿದ್ದರು. ಉತ್ಸವದ ಪ್ರಯುಕ್ತ ಇಂದು ರಾಜಾಂಗಣದಲ್ಲಿ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಮದ್ಯಾಹ್ನ ಮೂರೂವರೆ ಬಳಿಕ ಕೃಷ್ಣಮಠ ರಥಬೀದಿ ಸಹಿತ ಇಡೀ ಉಡುಪಿ ನಗರ ವಿವಿಧ ವೇಷಧಾರಿಗಳಿಂದ ತುಂಬಿತ್ತು. ಪರ್ಯಾಯ ಶೀರೂರು ಶ್ರೀ ವೇದವರ್ದನ ತೀರ್ಥ ಸ್ವಾಮೀಜಿ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಗೆ ಷೋಡಷೋಪಚಾರ ಪೂಜೆ ಮಾಡಿ, ನಂತರ ಮಹಾಪೂಜೆ ನೆರವೇರಿಸಿದರು.

ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ, ರಥಬೀದಿಗೆ ತರಲಾಯಿತು. ಬಳಿಕ ಪರ್ಯಾಯ ಶ್ರೀಪಾದರು ಆರತಿ ಬೆಳಗುವ ಮೂಲಕ ಚಿನ್ನದ ರಥೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ಗೊಲ್ಲ ವೇಷಧಾರಿಗಳು ರಥಬೀದಿಯ ಗುರ್ಜಿಗಳಲ್ಲಿ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಒಡೆದರು.

ಮೆರವಣಿಗೆಯಲ್ಲಿ ಜನಪದ ಹುಲಿವೇಷಗಳು ಹಾಗೂ ತರಹೇವಾರಿ ವೇಷಗಳು ಗಮನ ಸೆಳೆದವು. ಇದೇ ಮೊದಲ ಬಾರಿಗೆ ರಥಬೀದಿಯಲ್ಲಿ ಮಲ್ಲಯುದ್ದ ಆಯೋಜಿಸಲಾಗಿತ್ತು. ಕೃಷ್ಣಮಠದ ಬಲಪಾರ್ಶ್ವದಲ್ಲಿ ಇದಕ್ಕಾಗಿ ಅಂಗಣ ಸಿದ್ಧಗೊಳಿಸಲಾಗಿತ್ತು.

ವಿಟ್ಲಪಿಂಡಿ ಉತ್ಸವದ ಸಂದರ್ಭ ಸಾವಿರಾರು ಭಕ್ತರು ಮಲ್ಲಯುದ್ಧವನ್ನು ಕಣ್ತುಂಬಿಕೊಂಡು ರೋಮಾಂಚನಗೊಂಡರು.