Home Latest ಧರ್ಮಪ್ರಜ್ಞೆ ಜಾಗೃತಿಗೆ ಶಿಕ್ಷಣ, ತರಬೇತಿ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾಹಿತಿ…!!

ಧರ್ಮಪ್ರಜ್ಞೆ ಜಾಗೃತಿಗೆ ಶಿಕ್ಷಣ, ತರಬೇತಿ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾಹಿತಿ…!!

ಮುಂಬೈಯಲ್ಲಿ ಶ್ರೀಪುತ್ತಿಗೆ ಸಂಧ್ಯಾ, ಮಹಿಳಾ ವಿದ್ಯಾಪೀಠ ಉದ್ಘಾಟನೆ….

ಉಡುಪಿ: ಹಿಂದೂ ಸಮಾಜದ ಸ್ತ್ರೀಯರಲ್ಲಿರುವ ಧರ್ಮಪ್ರಜ್ಞೆ ಹಾಗೂ ಅಚಲ ಧರ್ಮನಿಷ್ಠೆಯ ಕಾರಣದಿಂದ ಸನಾತನ ಧರ್ಮ ಎಂದಿಗೂ ನಶಿಸದು. ಆ ಧರ್ಮಪ್ರಜ್ಞೆ ಮತ್ತಷ್ಟು ಜಾಗೃತಗೊಳಿಸಲು ಮಹಿಳಾ ವಿದ್ಯಾಪೀಠ ಆರಂಭಿಸಲಾಗಿದೆ. ಯಾಂತ್ರಿಕ ಜೀವನಶೈಲಿಯಿಂದ ತಮ್ಮತನ ಮರೆತ ಪುರುಷರಿಗಾಗಿ ವಿಶೇಷವಾಗಿ ವಿಪ್ರರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಲು ಸಂಧ್ಯಾ ವಿದ್ಯಾಪೀಠ ಸ್ಥಾಪಿಸಲಾಗಿದೆ. ಶಿಕ್ಷಣ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರವನ್ನೂ ನೀಡಲಾಗುವುದು ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ನವಿ ಮುಂಬೈಯಲ್ಲಿರುವ ಪುತ್ತಿಗೆ ಮಠದಲ್ಲಿ ಚಾತುರ್ಮಾಸ್ಯ ನಿರತ ಶ್ರೀಗಳು, ಜಗನ್ನಾಥ ದಾಸರ ಆರಾಧನೆಯ ದಿನವಾದ ಭಾನುವಾರ (ಸೆ.20) ಮುಂಬೈ ಮಠದಲ್ಲಿ ‘ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ’ ಉದ್ಘಾಟಿಸಿ, ಮಹಾಭಾರತ ತಾತ್ಪರ್ಯ ರ್ನಿಣಯದ ಶ್ಲೋಕ ಉಪದೇಶಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆಯಿತ್ತು ಆಶೀರ್ವಚನ ನೀಡಿದರು.

ಈಗಾಗಲೇ ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತಾ ನಗರಗಳಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬೈ ಮಹಾನಗರದಲ್ಲಿಯೂ ಧರ್ಮ ಹಾಗೂ ಸಂಸ್ಕೃತಿಯ ಪ್ರಸಾರ ವಿಸ್ತರಿಸಲಾಗುವುದು. ಮಹಿಳಾ ವಿದ್ಯಾಪೀಠದಲ್ಲಿ ದಾಸರ ಪದ, ಹರಿಕಥಾಮೃತ ಸಾರ, ಸಂಪ್ರದಾಯದ ಹಾಡು, ಭಜನೆ, ರಂಗವಲ್ಲಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿ ನೀಡಲಾಗುವುದು. ಸಂಧ್ಯಾ ವಿದ್ಯಾಪೀಠದಲ್ಲಿ ವೇದಾಧ್ಯಯನ, ಸಂಧ್ಯಾವಂದನೆ ಕಾರ್ಯಾಗಾರ, ದೇವಪೂಜಾ ಪದ್ಧತಿ, ಭಗವದ್ಗೀತೆ, ದಾಸರ ಪದ, ಭಜನೆ ಮುಂತಾದ ವಿಷಯಗಳ ಕುರಿತು ಕ್ರಮಬದ್ಧ ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು ಎಂದರು.

ಮಾನ್ಯೂರು ಅನಂತಮೂರ್ತಿ ಅವರು ಭಾಗ್ಯನಗರದ ಗುರು ರಾಘವೇಂದ್ರ ಮಠದಿಂದ ತಂದಿದ್ದ ರಾಯರ ಶೇಷವಸ್ತ್ರವನ್ನು ಪುತ್ತಿಗೆ ಶ್ರೀಗಳಿಗೆ ಸಮರ್ಪಿಸಿದರು. ಮಠದ ದಿವಾನ ನಾಗರಾಜ್ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ ಇನ್ನಿತರರು ಇದ್ದರು.

ಇಂತಹ ವಿದ್ಯಾಪೀಠಗಳು ಸಮಾಜಕ್ಕೆ ಆದರ್ಶಪ್ರಾಯವಾಗಲಿದೆ. ಲಕ್ಷಾಂತರ ಗುರುಕುಲ ಹಾಗೂ ವಿದ್ಯಾಪೀಠಗಳು ಇದ್ದಂತಹ ಈ ರಾಷ್ಟ್ರದಲ್ಲಿ ಇಂದು ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಪುತ್ತಿಗೆ ಶ್ರೀಗಳ ಸಂಕಲ್ಪದಿಂದ ದೇಶದ ಗತವೈಭವ ಪುನ:ಶ್ಚೇತನಗೊಳ್ಳಲಿ ಎಂದು ವಿದ್ವಾನ್ ಪ್ರಹ್ಲಾದ ಆಚಾರ್ಯ ನಾಗರಹಳ್ಳಿ ಹೇಳಿದ್ದಾರೆ.