Home Crime ಕಾಪು: ದನ ಕಳ್ಳತನ ಪ್ರಕರಣ – 24 ಗಂಟೆಯೊಳಗೆ 4 ಆರೋಪಿಗಳು ಅರೆಸ್ಟ್…!!

ಕಾಪು: ದನ ಕಳ್ಳತನ ಪ್ರಕರಣ – 24 ಗಂಟೆಯೊಳಗೆ 4 ಆರೋಪಿಗಳು ಅರೆಸ್ಟ್…!!

ಶಿರ್ವ: ಉಡುಪಿ ಜಿಲ್ಲೆಯ ‌ಶಿರ್ವ‌ ಸಮೀಪ ಕಳತ್ತೂರು ಗ್ರಾಮದ ನಡಿಗುತ್ತು ಬಳಿ ಮೇಯಲು ಬಿಟ್ಟಿದ್ದ ದನವನ್ನು ಟೆಂಪೋದಲ್ಲಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಶಿರ್ವ ಪೊಲೀಸರು 24 ಗಂಟೆಯೊಳಗೆ 4 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 19/09/2026 ರಂದು ಸಂಜೆ 4 ಗಂಟೆಗೆ ಕಳತ್ತೂರು ಗ್ರಾಮದ ನಡಿಗುತ್ತು ನಿವಾಸಿ ವಸಂತಿ ಸುನೀತಾ ಕ್ವಾಡ್ರಸ್ ಅವರು ಮೇಯಲು ಬಿಟ್ಟಿದ್ದ 5 ದನಗಳ ಪೈಕಿ 2 ವರ್ಷದ ಕಪ್ಪು ಬಣ್ಣದ ದನ ಕಾಣೆಯಾಗಿತ್ತು. ಹುಡುಕಾಡುವಾಗ ಹತ್ತಿರದಲ್ಲಿ ನಿಂತಿದ್ದ KA19B5641 ನಂಬರ್‌ನ ಟೆಂಪೋದಲ್ಲಿ ತಮ್ಮ ದನ ಸೇರಿ 2 ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡುಬಂದಿದೆ.

ವಾಹನದ ಬಳಿ ಇದ್ದ ಉಮ್ಮರಬ್ಬ ಮತ್ತು ಇತರ 3 ಜನರು ದೂರುದಾರರನ್ನು ನೋಡಿ ಟೆಂಪೋ ಚಲಾಯಿಸಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ವೃತ್ತ ನಿರೀಕ್ಷಕ ಅಝಮತ್ ಆಲಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

1ನೇ ಆರೋಪಿ ಉಮ್ಮರಬ್ಬ (64) ನನ್ನು ದಿನಾಂಕ 19/09/2026 ರಂದೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ತಲೆಮರೆಸಿಕೊಂಡಿದ್ದ ಇತರ ಆರೋಪಿಗಳಾದ ಮೊಹಮ್ಮದ್ ಶರೀಫ್ (31) ತಂದೆ ಉಮ್ಮರಬ್ಬ, ಶಂಶುದ್ದೀನ್ (57) ತಂದೆ ದಿ. ಶೇಖಬ್ಬ,ಮೊಹಮ್ಮದ್ ಆಸೀರ್ (24) ತಂದೆ ನಜೀರ್
ಎಲ್ಲರೂ ಕಳತ್ತೂರು ಗ್ರಾಮದವರು, ಇವರನ್ನು ದಿನಾಂಕ 20/09/2026 ರಂದು ಕಾಪುವಿನ ಕೊಪ್ಪಲಂಗಡಿ ಬಳಿ ವಾಹನ ಸಮೇತ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.

ಕೃತ್ಯಕ್ಕೆ ಬಳಸಿದ್ದ KA19B5641 ವಾಹನ ಮತ್ತು ಕಳ್ಳತನ ಮಾಡಿದ್ದ ದನವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾ PSI ಮಂಜುನಾಥ ಮರಬದ, ಪಡುಬಿದ್ರಿ PSI ಸಕ್ತಿವೇಲು ಇ, ಅನಿಲ್ ಕುಮಾರ್ ಟಿ ನಾಯ್ಕ್, ಹೆಬ್ರಿ PSI ಲೊಹಿತ್ ಕುಮಾರ್ ಹಾಗೂ ಶಿರ್ವ, ಕಾಪು, ಪಡುಬಿದ್ರಿ ಠಾಣಾ ಸಿಬ್ಬಂದಿ ಮತ್ತು ಉಡುಪಿ ಜಿಲ್ಲಾ CDR ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.